ಬೈಂದೂರು: ಆದರ್ಶ ಆಡಳಿತ ಮಂಡಳಿ, ಉತ್ತಮ ಸೇವೆ, ಸ್ಪಂದಿಸುವ ಸಿಬ್ಬಂದಿ, ಸದಸ್ಯರ ಉತ್ತಮ ಸಹಕಾರ ನಮ್ಮ ಸಹಕಾರಿ ಸಂಸ್ಥೆಯ ಅಭ್ಯುದಯಕ್ಕೆ ಕಾರಣ. ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ಸಾಧಿಸುತ್ತಿದೆ. ಸಂಘದ ಸದಸ್ಯರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ನಾವುಂದ ಮಾಂಗಲ್ಯ ಮಂಟಪದಲ್ಲಿ ಶುಕ್ರವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು ₹325 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ₹1.55 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 14 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘವು ಕಳೆದ ಸಾಲಿನಲ್ಲಿ ₹66.64 ಕೋಟಿ ಠೇವಣಿ ಹೊಂದಿ, ಸದಸ್ಯರಿಗೆ ₹58.86 ಕೋಟಿ ಸಾಲ ನೀಡಿದೆ. ಅದರಲ್ಲಿ ₹10 ಕೋಟಿಗೂ ಹೆಚ್ಚು ಕೃಷಿ ಸಾಲ ನೀಡಲಾಗಿದೆ. ವಿವಿಧ ನಿಧಿಗಳಲ್ಲಿ ₹5.33 ಕೋಟಿ, ಹೂಡಿಕೆಯಲ್ಲಿ ₹29.52 ಕೋಟಿ ಸಂಚಯಿಸಲಾಗಿದೆ. ಪ್ರಧಾನ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳೂ ಸ್ವಂತ ನಿವೇಶನ, ಕಟ್ಟಡ, ಗೋದಾಮು ಹೊಂದಿದ್ದು, ಪ್ರಧಾನ ಕಟ್ಟಡ ನವೀಕರಣ ಮಾಡಲಾಗಿದೆ. ಸಂಸ್ಥೆಯು ಕೃಷಿ, ಹೈನುಗಾರಿಕೆ, ಸದಸ್ಯರ ಸ್ವಾವಲಂಬಿ ಬದುಕಿಗೆ ಆರ್ಥಿಕ ಶಕ್ತಿ ನೀಡುವ ಜೊತೆಗೆ ಶಿಕ್ಷಣ, ಆರೋಗ್ಯ ಸೇವೆ, ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಮಾಹಿತಿ ನೀಡಿದರು.
ಎಸ್ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ 27 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಲೆಫ್ಟಿನೆಂಟ್ ಭರತ್ ದೇವಾಡಿಗ, ಮುಖ್ಯಂತ್ರಿ ಪದಕ ಪುರಸ್ಕೃತ ಪ್ರಶಾಂತ ಪೂಜಾರಿ, ಪಿಯುಸಿಯಲ್ಲಿ 9ನೇ ರ‍್ಯಾಂಕ್ ಪಡೆದ ಪ್ರಣತಿ ಉದಯ ಕುಮಾರ್ ಬಡಾಕೆರೆ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಆರ್. ಗಾಣಿಗ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಇದ್ದರು. ನಾಮ ನಿರ್ದೇಶಿತ ನಿರ್ದೇಶಕ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಸೋಮಯ್ಯ ಬಿಲ್ಲವ ನಿರೂಪಿಸಿದರು. ಪ್ರಭಾರ ಸಿಇಒ ಸುರೇಶ ಅಳ್ವೆಗದ್ದೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.