
ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ 900ಕ್ಕೂ ಹೆಚ್ಚು ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಿ.ಸುಧಾಕರ್ ಹೇಳಿದರು.
ಮಂಗಳವಾರ ಎಂಐಟಿ ಕ್ಯಾಂಪಸ್‌ಗೆ ಭೇಟಿನೀಡಿ ಕಾಲೇಜು ಆಡಳಿತ ಮಂಡಳಿಯ ಜತೆಗೆ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ‘ಮಾರ್ಚ್ 15ರ ನಂತರ ಎಂಐಟಿ ಕ್ಯಾಂಪಸ್‌ನಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. 8,000 ವಿದ್ಯಾರ್ಥಿಗಳು ಹಾಗೂ 3,000 ಸಿಬ್ಬಂದಿ ಸೇರಿ 11,000 ಮಂದಿಗೆ ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಪಾಸಿಟಿವಿಟಿ ದರ ಹೆಚ್ಚಾಗಿದೆ. ಸಮಾಧಾನದ ಸಂಗತಿ ಎಂದರೆ ಸೋಂಕಿತರಲ್ಲಿ ರೋಗದ ಲಕ್ಷಣಗಳು ತೀವ್ರವಾಗಿಲ್ಲ. ಮರಣ ಪ್ರಮಾಣ ಇಲ್ಲ ಎಂದರು.
ಹಿರಿಯರಿಗೆ ಸುಲಭವಾಗಿ ಸೋಂಕು ಹರಡುವ ಆಂತಕವಿರುವುದರಿಂದ ಸೋಂಕಿತರನ್ನು 14 ದಿನ ಐಸೊಲೇಷನ್‌ನಲ್ಲಿರಿಸಿ ಅವರ ಮೇಲೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ. ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳನ್ನು ಮಾತ್ರ ತವರಿಗೆ ಕಳುಹಿಸಲಾಗುತ್ತಿದೆ. ಮಾಹೆ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕ್ಯಾಂಪಸ್‌ನಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದಿರುವುದು ಹಾಗೂ ಸೋಂಕಿತ ವಿದ್ಯಾರ್ಥಿಗಳು ಹೊರಗೆ ಪಾರ್ಟಿ ಮಾಡಿರುವುದು ಸೋಂಕು ಹೆಚ್ಚು ಹರಡಲು ಪ್ರಮುಖ ಕಾರಣ ಇರಬಹುದು ಎಂದು ಶಂಕಿಸಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು.
ಬಳಿಕ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ವೈದ್ಯಕೀಯ ವ್ಯವಸ್ಥೆಗಳ ಕುರಿತು ಹಾಗೂ ಕೋವಿಡ್ ತಡೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಿಸಿದರು. ಈ ಸಂದರ್ಭ ಬಿಆರ್‌ಎಸ್ ಗ್ರೂಪ್ ಮುಖ್ಯಸ್ಥರಾದ ಬಿ.ಆರ್.ಶೆಟ್ಟಿ ಇದ್ದರು.
ನಂತರ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಭೇಟಿನೀಡಿದ ಸಚಿವ ಸುಧಾಕರ್ ಕೋವಿಡ್ ಲಸಿಕಾ ಕೊಠಡಿ, ರೋಗಿಗಳ ವಾರ್ಡ್‌ಗಳಿಗೆ ಭೇಟಿನೀಡಿ ರೋಗಿಗಳಿಂದ ಯೋಗಕ್ಷೇಮ ವಿಚಾರಿಸಿ ಅಹವಾಲು ಆಲಿಸಿದರು. ಕೋವಿಡ್ ಲಸಿಕಾ ಅಭಿಯಾನ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆದರು.
ಸಚಿವರ ಜತೆ ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಉಪ ವಿಭಾಗಾಧಿಕಾರಿ ಕೆ.ರಾಜು, ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.