ADVERTISEMENT

6 ಸಾವಿರ ಗಡಿ ದಾಟಿದ ಸೋಂಕು

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ; 3,444 ಸೋಂಕಿತರು ಗುಣಮುಖ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:39 IST
Last Updated 9 ಆಗಸ್ಟ್ 2020, 16:39 IST

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿದ್ದು, ಭಾನುವಾರ 282 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,201ಕ್ಕೇರಿಕೆಯಾಗಿದೆ.

ಐಎಲ್‌ಐ (ಶೀತಜ್ವರ) ಲಕ್ಷಣ ಇರುವವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ 69 ಜನರಲ್ಲಿ ಐಎಲ್‌ಐ ಲಕ್ಷಣಗಳಿವೆ.

ತೀವ್ರ ಉಸಿರಾಟದ ಸಮಸ್ಯೆ ಇದ್ದ 6, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 132 ಹಾಗೂ ಅಂತರ ಜಿಲ್ಲೆ ಪ್ರಯಾಣ ಮಾಡಿದ್ದ 6, ವಿದೇಶ ಪ್ರಯಾಣ ಹಿನ್ನೆಲೆ ಹೊಂದಿರುವ ಮೂವರಲ್ಲಿ ಹಾಗೂ ಬೇರೆ ಜಿಲ್ಲೆಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ 66 ಜನರ ಸೋಂಕಿನ ಮೂಲ ಪತ್ತೆ ಹೆಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

282 ಪ್ರಕರಣಗಳಲ್ಲಿ 77 ಸೋಂಕಿತರಿಗೆ ರೋಗದ ಲಕ್ಷಣಗಳು ಕಂಡುಬಂದರೆ, 205 ಮಂದಿಗೆ ಲಕ್ಷಣಗಳು ಇಲ್ಲ. ಲಕ್ಷಣಗಳಿಲ್ಲದ ಹಾಗೂ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವ 109 ಸೋಂಕಿತರಿಗೆ ಹೋಂ ಐಸೊಲೇಷನ್‌ ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಸದ್ಯ ಆಸ್ಪತ್ರೆಗಳಲ್ಲಿ 1,412 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, ಹೋಂ ಐಸೊಲೇಷನ್‌ನಲ್ಲಿ 1,285 ಇದ್ದಾರೆ.

ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 152, ಕುಂದಾಪುರ ತಾಲ್ಲೂಕಿನ 86 ಹಾಗೂ ಕಾರ್ಕಳ ತಾಲ್ಲೂಕಿನ 43 ಮಂದಿ ಇದ್ದಾರೆ. ಇವರಲ್ಲಿ 109 ಹೋಂ ಐಸೊಲೇಷನ್‌ ಹಾಗೂ 173 ಮಂದಿ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1,383 ಮಾದರಿ ಸಂಗ್ರಹ

ಸಮುದಾಯ ಮಟ್ಟದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಾದರಿ ಸಂಗ್ರಹ ಪ್ರಮಾಣ ಹೆಚ್ಚಿಸಿದ್ದು, ಭಾನುವಾರ 1,383 ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಿದೆ.

ಕೋವಿಡ್‌ ಶಂಕೆ ಇದ್ದ 929, ಕೋವಿಡ್‌ ಸಂಪರ್ಕವಿದ್ದ 175, ಸಾರಿ ಲಕ್ಷಣಗಳಿದ್ದ 4, ಐಎಲ್‌ಐ ಲಕ್ಷಣಗಳಿದ್ದ 45 ಹಾಗೂ ಕೋವಿಡ್‌ ಹಾಟ್‌ಸ್ಟಾಟ್‌ ಪ್ರದೇಶಗಳ ಸಂಪರ್ಕವಿದ್ದ 230 ಜನರ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. 1,298 ವರದಿಗಳು ಬರುವುದು ಬಾಕಿ ಇದೆ.

ಒಂದೆಡೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಭಾನುವಾರ 97 ಸೇರಿ ಜಿಲ್ಲೆಯಲ್ಲಿ 3,444 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 2,697 ಸಕ್ರಿಯ ಸೋಂಕಿತ ಪ್ರಕರಣಗಳಿವೆ. 60 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.