ADVERTISEMENT

‘ಎಲ್ಲರೂ ಗೋವುಗಳ ರಕ್ಷಣೆಗೆ ಮುಂದಾಗಿ’; ಪವನ್‌ ಕಲ್ಯಾಣ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 7:03 IST
Last Updated 8 ಡಿಸೆಂಬರ್ 2025, 7:03 IST
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸನ್ಮಾನಿಸಿದರು
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸನ್ಮಾನಿಸಿದರು   

ಉಡುಪಿ: ‘ಗೋವುಗಳ ಸಂರಕ್ಷಣೆ ಕೇವಲ ಭಾವನಾತ್ಮಕ ವಿಷಯವಲ್ಲ. ಅದು ಧರ್ಮ ತತ್ವಗಳು ಬೋಧಿಸಿರುವ ವಿಚಾರಗಳಾಗಿವೆ. ಎಲ್ಲಾ ಸಮುದಾಯದವರು ಗೋವುಗಳ ರಕ್ಷಣೆಗೆ ಮುಂದಾಗಬೇಕು’ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್‌ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದು ಕುಟುಂಬ ಒಂದು ದನವನ್ನಾದರೂ ಸಾಕಬೇಕು. ಇನ್ನೊಂದು ಸಮುದಾಯದವರನ್ನು ದೂಷಿಸುವ ಮೊದಲು ನಾವು ಹಿಂದೂಗಳಾಗಿ ಗೋಮಾತೆಯ ರಕ್ಷಣೆಗಾಗಿ ಏನು ಮಾಡುತ್ತಿದ್ದೇವೆ ಎಂಬುದನ್ನು ಚಿಂತಿಸಬೇಕು’ ಎಂದರು.

ADVERTISEMENT

‘ಸನಾತನ ಧರ್ಮ ಎಂದರೆ ಮೂಢನಂಬಿಕೆಯಲ್ಲ. ಆಧ್ಯಾತ್ಮಿಕ ಜ್ಞಾನವನ್ನು ಹೊಂದಿರುವ ವಿಜ್ಞಾನವಾಗಿದೆ. ಪಾಶ್ಚಿಮಾತ್ಯ ಶಕ್ತಿಗಳು ನಮ್ಮ ಸನಾತನ ಧರ್ಮವನ್ನು ನಾಶಮಾಡಲು ಯತ್ನಿಸಿದ್ದವು. ಇಂದು ಸನಾತನ ಧರ್ಮವನ್ನು ಪದೇ ಪದೇ ಗುರಿಯಾಗಿಸುತ್ತಿರುವುದನ್ನು ನೋಡುತ್ತಿದ್ದೇವೆ. ತಮಿಳುನಾಡು ಮೊದಲಾದೆಡೆ ಇದು ನಡೆಯುತ್ತಿದೆ’ ಎಂದು ಹೇಳಿದರು.

‘ಸನಾತನ ಧರ್ಮದ ಬೇರುಗಳು ಆಳವಾದ ವೇದ ಜ್ಞಾನ ಮತ್ತು ಗೀತೆಯ ಸತ್ವವನ್ನು ಒಳಗೊಂಡಿದೆ. ನಾವು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ’ ಎಂದು ತಿಳಿಸಿದರು.

‘ಭಗವದ್ಗೀತೆಯು ಮಾನವೀಯತೆಯ ಪ್ರಣಾಳಿಕೆಯಾಗಿದೆ. ಧರ್ಮ ಮತ್ತು ಸಂವಿಧಾನ ಎರಡು ಬೇರೆ ಬೇರೆಯಾದರೂ ಅವುಗಳು ಶಾಂತಿಯುತ ಸಮಾಜಕ್ಕಾಗಿ ಮಾರ್ಗದರ್ಶನ ನೀಡುವವುಗಳಾಗಿವೆ’ ಎಂದರು.

‘ಇಂದಿನ ಜೆನ್ ಝೀಗಳು ಭಗವದ್ಗೀತೆಯನ್ನು ಕೇವಲ ಪೂಜೆ ಮಾಡುವ ಗ್ರಂಥ ಎಂದು ತಿಳಿದುಕೊಳ್ಳಬಾರದು ಅದನ್ನು ಓದಬೇಕು. ಬದುಕಿನ ಸಂಕಷ್ಟದ ಸಮಯದಲ್ಲಿ ಅದು ಮಾರ್ಗದರ್ಶನ ನೀಡುತ್ತದೆ’ ಎಂದು ಪ್ರತಿಪಾದಿಸಿದರು.

‘ಜಗತ್ತಿನ ಮಹಾ ಮೇಧಾವಿಗಳು ಭಗವದ್ಗೀತೆಯಿಂದ ಪ್ರಭಾವಿತರಾಗಿದ್ದಾರೆ. ಇಂದಿನ ಸಂಘರ್ಷಭರಿತ ಸಂದರ್ಭದಲ್ಲಿ ಭಗವದ್ಗೀತೆ ಹೆಚ್ಚು ಪ್ರಸ್ತುತವಾಗಿದೆ. ಗೀತೆಯನ್ನು ಓದಿ ಮರೆತು ಬಿಡುವುದಲ್ಲ ನಮ್ಮ ಪ್ರತಿ ನಿರ್ಧಾರಗಳಲ್ಲೂ ಅದರ ಪ್ರಭಾವ ಇರಬೇಕು’ ಎಂದು ಹೇಳಿದರು.

‘ಕೃಷ್ಣ ಮಠದ ಕನಕನ ಕಿಂಡಿ ಕೇವಲ ಕಿಟಕಿಯಲ್ಲ ಅದು ಜಾತಿ, ಸ್ಥಾನಮಾನ, ಅಧಿಕಾರಕ್ಕಿಂತ ಭಕ್ತಿಯೇ ದೊಡ್ಡದು ಎಂಬ ಸಂದೇಶವನ್ನು ಸಾರುತ್ತಿದೆ. ಅದು ನಮ್ಮ ಸನಾತನ ಧರ್ಮದ ಸೌಂದರ್ಯವಾಗಿದೆ’ ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಇಸ್ಕಾನ್‌ ಮಾಯಾಪುರಿಯ ಸುಭಾಗ ಸ್ವಾಮಿ ಗುರುಮಹಾರಾಜ್‌, ಶಾಸಕ ಯಶ್‌ಪಾಲ್‌ ಸುವರ್ಣ, ಟಿಟಿಡಿ ಅಧ್ಯಕ್ಷ ವಿ.ಆನಂದ ಸಾಯಿ, ನರೇಶ್ ಸ್ವಾಮಿ, ಉದ್ಯಮಿಗಳಾದ ರಾಘವೇಂದ್ರ ರಾವ್‌, ಮುರಳಿ ಬಲ್ಲಾಳ್‌ ಉಪಸ್ಥಿತರಿದ್ದರು.

ಉಡುಪಿ ಕೇವಲ ದೇಗುಲ ನಗರಿಯಲ್ಲ ಬದಲಾಗಿ ಭಾರತದ ಅಧ್ಯಾತ್ಮದ ಶಕ್ತಿ ಕೇಂದ್ರವಾಗಿದೆ. ಮಧ್ವಾಚಾರ್ಯರ ತತ್ವ ಸಿದ್ಧಾಂತವನ್ನು ಜಗದಗಲ ಪಸರಿಸುವ ಕೆಲಸವನ್ನು ಪುತ್ತಿಗೆ ಶ್ರೀಗಳು ಮಾಡುತ್ತಿದ್ದಾರೆ.
ಪವನ್‌ ಕಲ್ಯಾಣ್‌ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.