ADVERTISEMENT

₹ 18 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 16:03 IST
Last Updated 23 ಜೂನ್ 2022, 16:03 IST
ಬಂಧಿತ ಆರೋಪಿಗಳು, ವಶಪಡಿಸಿಕೊಂಡ ಆಭರಣ
ಬಂಧಿತ ಆರೋಪಿಗಳು, ವಶಪಡಿಸಿಕೊಂಡ ಆಭರಣ   

ಉಡುಪಿ: ಮುಂಬೈ ಮೂಲದ ಚಿನ್ನದ ವ್ಯಾಪಾರಿಯಿಂದ ಈಚೆಗೆ ಕಳವು ಮಾಡಲಾಗಿದ್ದ ₹ 18 ಲಕ್ಷ ಮೌಲ್ಯದ 466 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಅಲಿಖಾನ್‌, ಅಮ್ಜದ್ ಖಾನ್, ಇಕ್ರಾರ್ ಖಾನ್‌ ಹಾಗೂ ಗೋಪಾಲ್ ಅಮ್ಲಾವರ್ ಬಂಧಿತ ಆರೋಪಿಗಳು.

ಪ್ರಕರಣದ ವಿವರ:ಈಶ್ವರ ದಾಲಿಚಂದ್ ಪೊರ್ವಾಲ್ ಎಂಬುವರು ಮುಂಬೈನಿಂದ ಚಿನ್ನವನ್ನು ತಂದು ಮಂಗಳೂರು ಹಾಗೂ ಹೈದರಾಬಾದ್‌ ನಗರಗಳಲ್ಲಿ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಜೂನ್ 14ರಂದು 466 ಗ್ರಾಂ ಚಿನ್ನವನ್ನು ಸೂಟ್‌ಕೇಸ್‌ನಲ್ಲಿಟ್ಟುಕೊಂಡು ಮುಂಬೈ–ಮಂಗಳೂರು ಮಾರ್ಗದ ಖಾಸಗಿ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು.

ADVERTISEMENT

ಬೆಳಗಿನ ಉಪಹಾರಕ್ಕೆ ಬೈಂದೂರು ತಾಲ್ಲೂಕಿನ ಶಿರೂರು ಬಳಿ ಬಸ್‌ ನಿಲ್ಲಿಸಿದಾಗ ಕಳ್ಳರು ಚಿನ್ನವಿದ್ದ ಸೂಟ್‌ಕೇಸ್‌ ಕದ್ದು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಘಟನೆ ಸಂಬಂಧ ಈಶ್ವರ ದಾಲಿಚಂದ್ರ ಪೊರ್ವಾಲ್ ಬೈಂದೂರು ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆಗೆ ಬೈಂದೂರು ಇನ್‌ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ ರಚಿಸಲಾಗಿತ್ತು. ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ ಗಂಗೊಳ್ಳಿ ಪಿಎಸ್‌ಐ ವಿನಯ್‌ ಎಂ.ಕೊರ್ಲಹಳ್ಳಿ, ಅಪರಾಧ ವಿಭಾಗದ ಸಿಬ್ಬಂದಿ ಮೋಹನ ಪೂಜಾರಿ, ನಾಗೇಂದ್ರ, ಶ್ರೀಧರ್ ಅವನ್ನೊಳಗೊಂಡ ತಂಡ ಜೂನ್ 19ರಂದು ಮಹಾರಾಷ್ಟ್ರದ ದುಲೆ ಜಿಲ್ಲೆಯ ಸೋನ್‌ಗಿರ್ ಟೋಲ್‌ಗೇಟ್‌ನಲ್ಲಿ ಆರೋಪಿಗಳನ್ನು ಬಂಧಿಸಿದೆ.

ಬಂಧಿತರಿಂದ ಕಳುವಾಗಿದ್ದ 466 ಗ್ರಾಂ ಚಿನ್ನಾಭರಣ, ಒಂದು ಕಾರು, ಮೊಬೈಲ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯಲ್ಲಿ ಬೈಂದೂರು ಠಾಣೆ ಪಿಎಸ್‌ಐ ‍ಪವನ್ ನಾಯಕ್, ಸಿಬ್ಬಂದಿ ಕೃಷ್ಣ ದೇವಾಡಿಗ, ಸುಜಿತ್, ಪ್ರಿನ್ಸ್, ಶ್ರೀನಿವಾಸ, ರಾಘವೇಂದ್ರ, ನಾಗೇಶ್ ಗೌಡ ಸಹಕರಿಸಿದ್ದಾರೆ.

ಪ್ರಕರಣದ ತನಿಖೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.