ADVERTISEMENT

ಉಡುಪಿ: ಪ್ರಾಥಮಿಕ ಸಂಪರ್ಕ ಮುಚ್ಚಿಟ್ಟರೆ ಕ್ರಿಮಿನಲ್ ಕೇಸ್‌

ಸೋಂಕಿತರು ಕಡ್ಡಾಯವಾಗಿ ಪ್ರಯಾಣ ವಿವರ ನೀಡಬೇಕು: ಡಿಸಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 15:07 IST
Last Updated 17 ಆಗಸ್ಟ್ 2020, 15:07 IST
ಜಿ. ಜಗದೀಶ್‌
ಜಿ. ಜಗದೀಶ್‌   

ಉಡುಪಿ: ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಮುಚ್ಚಿಡುವ ಹಾಗೂ ಪ್ರಯಾಣದ ವಿವರ ನೀಡದ ಕೋವಿಡ್‌ ಸೋಂಕಿತರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಈಚೆಗೆ ಕೆಲವು ಸೋಂಕಿತರು ಅಧಿಕಾರಿಗಳಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿ ಕೊಡುತ್ತಿಲ್ಲ. ಜತೆಗೆ ಭೇಟಿ ನೀಡಿರುವ ಸ್ಥಳಗಳ ಮಾಹಿತಿಯನ್ನೂ ಮುಚ್ಚಿಡುತ್ತಿದ್ದಾರೆ. ಕೆಲವರ ಮೊಬೈಲ್‌ ಕರೆ ವಿವರಗಳನ್ನು ಪರಿಶೀಲಿಸಿದಾಗ ಈ ಅಂಶಗಳು ಬಹಿರಂಗವಾಗಿವೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೊಳಪಡಿಸಿದಾಗ ಶೇ 50ರಷ್ಟು ಜನರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಕಂಡುಬಂದಿದೆ.ಪ್ರಾಥಮಿಕ ಸಂಪರ್ಕ ಹಾಗೂ ಪ್ರಯಾಣದ ಮಾಹಿತಿ ಮುಚ್ಚಿಟ್ಟರೆ, ಸೋಂಕು ವ್ಯಾಪಕವಾಗುವ ಆತಂಕವಿದ್ದು, ಅಗತ್ಯ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ADVERTISEMENT

ಕೋವಿಡ್‌ ಪರೀಕ್ಷೆಗೊಳಪಟ್ಟ ಬಳಿಕ ಪಾಸಿಟಿವ್‌ ಬಂದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಈ ಸಂದರ್ಭ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾದರೆ ಇಲಾಖೆಯ ವಾಹನದಲ್ಲಿ ಬರಬೇಕು, ಮನೆಯಲ್ಲಿ ಚಿಕಿತ್ಸೆ ಪಡೆಯಲಿಚ್ಚಿಸಿದರೆ ಹೋಂ ಐಸೊಲೇಷನ್‌ಗೆ ಒಳಗಾಗಬೇಕು. ಬದಲಾಗಿ ವೈದ್ಯರ ಜತೆ ಅನುಚಿತವಾಗಿ ವರ್ತಿಸಿದರೆ, ಸರಿಯಾಗಿ ಮಾತನಾಡದಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕವನ್ನು ಪತ್ತೆಹಚ್ಚಿ ಪರೀಕ್ಷೆಗೊಳಪಡಿಸಿ ಹೋಂ ಕ್ವಾರಂಟೈನ್‌ ಮಾಡಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಅಧಿಕಾರಿಗಳ ಸೂಚನೆಗಳನ್ನು ಎಲ್ಲರು ಪಾಲಿಸಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.