ADVERTISEMENT

ಗ್ರಾಹಕರಿಗೆ ಇರಲಿ ಕಾನೂನುಗಳ ಅರಿವು: ಕೊಡಂಚ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 14:13 IST
Last Updated 20 ನವೆಂಬರ್ 2021, 14:13 IST
ಬಳಕೆದಾರರ ವೇದಿಕೆ ಅಧ್ಯಕ್ಷ ಡಾ.ಎ.ಪಿ.ಕೊಡಂಚ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಳಕೆದಾರರ ವೇದಿಕೆ ಅಧ್ಯಕ್ಷ ಡಾ.ಎ.ಪಿ.ಕೊಡಂಚ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಸ್ಥಾಪನೆಯಾದ ಉಡುಪಿ ಬಳಕೆದಾರರ ವೇದಿಕೆಯು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದು, ಅನ್ಯಾಯಕ್ಕೊಳಗಾದ ನೂರಾರು ಗ್ರಾಹಕರಿಗೆ ನ್ಯಾಯ ಕೊಡಿಸುವಂತಹ ಕೆಲಸ ಮಾಡಿದೆ ಎಂದು ಬಳಕೆದಾರರ ವೇದಿಕೆ ಅಧ್ಯಕ್ಷ ಡಾ.ಎ.ಪಿ.ಕೊಡಂಚ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರು ಅನ್ಯಾಯಕ್ಕೊಳಗಾದಾಗ ಕಾನೂನಿನಡಿ ಪರಿಹಾರ ಪಡೆಯಬಹುದು. ಆದರೆ, ಬಹಳಷ್ಟು ಮಂದಿಗೆ ಕಾನೂನುಗಳ ಅರಿವೇ ಇಲ್ಲ. ಗ್ರಾಹಕರ ಕಾನೂನುಗಳ ಬಗ್ಗೆ ಪ್ರಚಾರವಾಗಬೇಕು, ಕಾನೂನು ಕಮ್ಮಟಗಳು ನಡೆಯಬೇಕು. ಕಾರ್ಯಾಗಾರಗಳು, ಪರಿಚಯಾತ್ಮಕ ಸಭೆಗಳು ನಡೆಯಬೇಕು ಎಂದರು.

ಈ ನಿಟ್ಟಿನಲ್ಲಿ ಬಳಕೆದಾರರ ವೇದಿಕೆಯು ಸಾರ್ವಜನಿಕರಲ್ಲಿ ಗ್ರಾಹಕರ ಕಾನೂನುಗಳ ಅರಿವು ಮೂಡಿಸಲು ಶ್ರಮಿಸುತ್ತಿದ್ದು, ಗ್ರಾಹಕ ಜಾಗೃತಿ, ಗ್ರಾಹಕ ಆಂದೋಲನಗಳಿಗೆ ಒತ್ತು ನೀಡುತ್ತಿದೆ. ನಿರಂತರ ಸಭೆಗಳನ್ನು ನಡೆಸಿ ನ್ಯಾಯಾಲಯಗಳಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯುವ ಕ್ರಮ ಹೇಗೆ, ಗ್ರಾಹಕ ಕ್ಲಬ್‌ಗಳ ಸ್ಥಾಪನೆಯ ಮೂಲಕ ಗ್ರಾಹಕರ ಕಾನೂನುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ADVERTISEMENT

2019ರಲ್ಲಿ ಕೇಂದ್ರ ಸರ್ಕಾರ ಗ್ರಾಹಕ ರಕ್ಷಣಾ ಕಾನೂನು ಪರಿಷ್ಕರಿಸಿದ್ದು, ವಿಸ್ತಾರಗೊಂಡಿದೆ. ಗ್ರಾಹಕರು ವಂಚನೆಗೆ ಒಳಗಾದರೆ ಧೈರ್ಯವಾಗಿ ಹೋರಾಟಕ್ಕಿಳಿಬೇಕು. ಬಳಕೆದಾರರ ವೇದಿಕೆಯ ನೆರವು ಪಡೆಯಬಹುದು ಎಂದು ಎ.ಪಿ.ಕೊಡಂಚ ತಿಳಿಸಿದರು.

ಮೆಸ್ಕಾಂ ವಿದ್ಯುತ್ ಸಂಪರ್ಕ ಕೊಟ್ಟ ಬಳಿಕ ಗ್ರಾಹಕರಿಂದ ನಿರ್ಧಿಷ್ಟ ಠೇವಣಿ ಪಡೆಯುತ್ತದೆ. ಮುಂದೆ ವಿದ್ಯುತ್ ಸಂಪರ್ಕ ಬೇಡ ಎಂದಾಗ ಠೇವಣಿಯನ್ನು ಮೆಸ್ಕಾಂ ಗ್ರಾಹಕರಿಗೆ ಮರಳಿಸಬೇಕು. ಮೆಸ್ಕಾಂನಿಂದ ಠೇವಣಿ ಮರಳಿ ಪಡೆಯಲು ರಶೀದಿ ಅಗತ್ಯವಾಗಿದ್ದು, ಬ್ಯಾಂಕ್‌ ಠೇವಣಿ ರಶೀದಿ ಮಾದರಿಯಲ್ಲಿ ದೀರ್ಘಕಾಲ ಸಂರಕ್ಷಿಸಿ ಇಡಬಹುದಾದ ರಶೀದಿಯನ್ನು ಎಲ್ಲ ಗ್ರಾಹಕರಿಗೆ ನೀಡಬೇಕು ಎಂದು ಬಳಕೆದಾರರ ವೇದಿಕೆ ಹೋರಾಟ ನಡೆಸುತ್ತಿದೆ ಎಂದು ಕೊಡಂಚ ತಿಳಿಸಿದರು.

ಅದೇ ರೀತಿ ಬಿಎಸ್‌ಎನ್‌ಎಲ್‌ ಸ್ಥಿರ ಠೇವಣಿ ಪಡೆದು ಗ್ರಾಹಕರಿಗೆ ಠೇವಣಿ ಮರಳಿಸುವಾಗ ಆಗುತ್ತಿರುವ ಸಮಸ್ಯೆಗಳ ಕುರಿತೂ ಬಳಕೆದಾರರ ವೇದಿಕೆ ಧನಿ ಎತ್ತುವ ಮೂಲಕ ಮಾಹಿತಿ ಹಕ್ಕಿನಡಿ ಮಾಹಿತಿ ಕಲೆ ಹಾಕುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಾದಿರಾಜ ಆಚಾರ್ಯ, ಕೆ.ನಾರಾಯಣ್‌, ಜಯಚಂದ್ರ ರಾವ್‌, ಸ್ವಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.