ADVERTISEMENT

ಉಡುಪಿ:‘ತೌಕ್ತೆ’ಅಬ್ಬರಕ್ಕೆ ನೂರಾರು ಮರಗಳು ನೀರಿಗೆ, ಲೈಟ್‌ಹೌಸ್ ಬಂಡೆಗೆ ಬಡಿದ ಅಲೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 9:44 IST
Last Updated 15 ಮೇ 2021, 9:44 IST
ಕಾಪು ಬೀಚ್‌ನ ಲೈಟ್ ಹೌಸ್ ಚಿತ್ರ
ಕಾಪು ಬೀಚ್‌ನ ಲೈಟ್ ಹೌಸ್ ಚಿತ್ರ   

ಉಡುಪಿ: ‘ತೌಕ್ತೆ’ ಚಂಡಮಾರುತದ ಅಬ್ಬರಕ್ಕೆ ಕಾಪು, ಬೈಂದೂರು ಹಾಗೂ ಉಡುಪಿ ತಾಲ್ಲೂಕಿನಲ್ಲಿ ಭಾರಿ ಕಡಲ್ಕೊರೆತ ಉಂಟಾಗಿದೆ. ಸಮುದ್ರದಲ್ಲಿ ನೀರಿನಮಟ್ಟ ಹೆಚ್ಚಾಗಿದ್ದು, ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಪರಿಣಾಮ, ತಡೆಗೋಡೆಗಳಿಗೆ ಹಾನಿಯಾಗಿದ್ದು, ತೀರಕ್ಕೆ ಹಾಕಲಾಗಿದ್ದ ದೈತ್ಯ ಕಲ್ಲುಗಳು ಸಮುದ್ರ ಪಾಲಾಗಿವೆ. ತೀರದಲ್ಲಿದ್ದ ನೂರಾರು ಮರಗಳು ಸಮುದ್ರ ಪಾಲಾಗಿವೆ.

ಬೈಂದೂರು ತಾಲ್ಲೂಕಿನ ಮರವಂತೆ ತೀರದಲ್ಲಿರುವ ಕರಾವಳಿ ಮಾರ್ಗದ ಕಾಂಕ್ರಿಟ್‌ ರಸ್ತೆ ತುಂಡಾಗಿದೆ. ಸಮುದ್ರಕ್ಕೆ ತಾಗಿಕೊಂಡಿರುವ 500 ಮೀಟರ್ ಉದ್ದದ ಭೂಭಾಗ ಕೊಚ್ಚಿಹೋಗಿದೆ. ಇಬ್ಬರು ಮೀನುಗಾರಿಕಾ ಶೆಡ್‌ಗಳಿಗೆ ಹಾನಿಯಾಗಿದೆ. ಇಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುವ ಅಪಾಯವಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಕಿರಿಮಂಜೇಶ್ವರದ ಹೊಸಹಿತ್ಲು, ಉಪ್ಪುಂದದ ತಾರಾಪತಿ ಪ್ರದೇಶ, ಹೊಸಾಡಿನ ಕಂಚುಕೋಡು, ಶೀರೂರಿನ ದೊಂಬೆಯ ತೀರ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ಉಂಟಾಗಿದೆ

ADVERTISEMENT

ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಬೀಚ್‌ನಲ್ಲಿ ತೀರ ಪ್ರದೇಶಕ್ಕೆ ನೀರು ನುಗ್ಗಿದೆ. ದೈತ್ಯ ಅಲೆಗಳು ಲೈಟ್‌ ಹೌಸ್‌ನ ಬಂಡೆಗೆ ಬಡಿಯುತ್ತಿವೆ. ತೀರದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಡಾ, ಉಚ್ಚಿಲ, ಪಡುಬಿದ್ರಿ, ನಡಿಪಟ್ನದಲ್ಲಿ ಕಡಲ್ಕೊರೆತ ಸಂಭವಿಸಿದೆ.

ಉಡುಪಿಯ ಮಲ್ಪೆ ಬೀಚ್‌ನ ತೀರವನ್ನು ಸಮುದ್ರ ಅಪೋಷನ ತೆಗೆದುಕೊಂಡಿದೆ. ತೀರದಲ್ಲಿದ್ದ ನಾಡದೋಣಿಗಳನ್ನು ಕ್ರೇನ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಬಿರುಸಿನ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.