ಉಡುಪಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭೂಮಿ ಮತ್ತು ವಸತಿ ಹಕ್ಕು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕು ಕಚೇರಿಗಳ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಉಡುಪಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನುಗಳನ್ನು ಅರ್ಹ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಅಕ್ರಮ ಸಕ್ರಮ ಸಮಿತಿಗಳು ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇಕಡ 50 ಅನ್ನು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಉಚ್ಚಿಲ ಸಾರ್ವಜನಿಕ ರುದ್ರ ಭೂಮಿಯನ್ನು ಉಪಯೋಗಕ್ಕೆ ಬಿಟ್ಟುಕೊಡಬೇಕು, ಅಕ್ರಮ ಸಕ್ರಮ ಯೋಜನೆ ಅಡಿ ಅರ್ಜಿ ಸಲ್ಲಿಸಿರುವ ದಲಿತರ ಅರ್ಜಿಗಳಿಗೆ ಆದ್ಯತೆ ನೀಡಬೇಕು ಎಂದರು.
ಪ್ರತಿ ವರ್ಷ ಜುಲೈ ಒಂದರಂದು ಲಭ್ಯ ಸರ್ಕಾರಿ ಜಮೀನು ಬಗ್ಗೆ ಅಧಿಸೂಚನೆ ಹೊರಡಿಸಬೇಕು. ವಸತಿ ಯೋಜನೆ ಸ್ಥಗಿತಗೊಂಡಿದ್ದು ಅದನ್ನು ಪುನರ್ ಆರಂಭಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನುಗಳ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಯನ್ನು ಸಡಿಲಗೊಳಿಸಬೇಕು ಎಂದೂ ಆಗ್ರಹಿಸಿದರು.
ಲೋಹಿತ್ ಕುಮಾರ್, ಬಸವರಾಜ್, ಶಂಕರ್ ದಾಸ್, ಭಾಸ್ಕರ, ಪುಷ್ಪರಾಜ್, ಕೃಷ್ಣ ಬೆಳ್ಳಿ, ಲಕ್ಕವ್ವ ಮೊದಲಾದವರು ಪಾಲ್ಗೊಂಡಿದ್ದರು.
ಬಳಿಕ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಗುರುರಾಜ್ ಅವರಿಗೆ ಸಲ್ಲಿಸಲಾಯಿತು. ಪರಿಶಿಷ್ಟ ಜಾತಿ, ಪಂಗಡದವರಿಗೆ ಭೂಮಿ ಮಂಜೂರಾತಿ ಕುರಿತ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗಲು ಅವರಿಗಾಗಿ ವಿಶೇಷ ಕಂದಾಯ ಅದಾಲತ್ ಅನ್ನು ಕೂಡಲೇ ನಡೆಸಬೇಕು.-ಸುಂದರ್ ಮಾಸ್ಟರ್ ರಾಜ್ಯ ಸಂಘಟನಾ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.