ADVERTISEMENT

216 ಗಂಟೆ ನಿರಂತರ ಭರತನಾಟ್ಯ: ದೀಕ್ಷಾ ದಾಖಲೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:43 IST
Last Updated 30 ಆಗಸ್ಟ್ 2025, 18:43 IST
ದೀಕ್ಷಾ
ದೀಕ್ಷಾ   

ಉಡುಪಿ: ‌ನಿರಂತರ 216 ಗಂಟೆ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ದೀಕ್ಷಾ ವಿ. ಅವರು ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ನಲ್ಲಿ ದಾಖಲೆ ಬರೆದರು.

170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಪೂರೈಸಿ ಈ ಮೊದಲು ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ ಸಾಧನೆ ಮಾಡಿದ್ದ ಮಂಗಳೂರಿನ ರೆಮೋನಾ ಇವೆಟ್‌ ಪಿರೇರಾ ಅವರ ದಾಖಲೆಯನ್ನು ದೀಕ್ಷಾ ಅವರು ಮುರಿದಿದ್ದಾರೆ.

ಉಡುಪಿಯ ಡಾ. ಜಿ. ಶಂಕರ್‌ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ದೀಕ್ಷಾ ಅವರು ಪ್ರತಿ ಮೂರು ಗಂಟೆಗೆ ಹದಿನೈದು ನಿಮಿಷ ಬಿಡುವು ಪಡೆಯುವ ಮೂಲಕ 216 ಗಂಟೆಗಳನ್ನು ಪೂರೈಸಿದರು.

‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಮನೀಶ್‌ ವಿಷ್ಣೋಯಿ ಅವರು ಈ ದಾಖಲೆಗೆ ಸಾಕ್ಷಿಯಾಗಿದರು.

ADVERTISEMENT

ದೀಕ್ಷಾ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಶನಿವಾರ ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಅಭಿನಂದಿಸಿದರು.

ಅಭಿನಂದನಾ ಸಮಾರಂಭದಲ್ಲಿ ದೀಕ್ಷಾ ಅವರ ನೃತ್ಯ ಗುರು ವಿದ್ವಾನ್‌ ಶ್ರೀಧರ ರಾವ್‌, ತಂದೆ ವಿಠಲ್‌ ಪೂಜಾರಿ, ತಾಯಿ ಶುಭ, ಪತಿ ರಾಹುಲ್‌, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್‌, ಉದ್ಯಮಿ ಜಿ. ಶಂಕರ್‌, ಮಹೇಶ್‌ ಠಾಕೂರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.