ADVERTISEMENT

ನೊಂದ ಮಹಿಳೆಗೆ ಸಾಂತ್ವನ ಸೌಲಭ್ಯ ಸಿಗಲಿ: ಜಿಲ್ಲಾಧಿಕಾರಿ ಕೂರ್ಮಾರಾವ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:59 IST
Last Updated 23 ಸೆಪ್ಟೆಂಬರ್ 2022, 13:59 IST
ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.
ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.   

ಉಡುಪಿ: ಸಮಾಜದಲ್ಲಿ ದುರ್ಬಲ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಅವರ ಮೇಲೆ ನಡೆಯುವ ಶೋಷಣೆಗಳ ವಿರುದ್ಧ ನಿಂತು ಕಾನೂನಿನ ಅಡಿಯಲ್ಲಿರುವ ಅವಶ್ಯ ನೆರವು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚಿಸಿದರು.

ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಹಿಳೆಯರ ಸಬಲೀಕರಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಉದ್ದೇಶ. ಮಹಿಳೆಯರು ಹಾಗೂ ಮಕ್ಕಳ ಮೇಲೆ ಸಮಾಜದ ದೌರ್ಜನ್ಯಗಳು ನಡೆದರೆ ಮಾಹಿತಿ ಬಂದ ಕೂಡಲೇ ಸಂತ್ರಸ್ತರಿಗೆ ಸಾಂತ್ವನ ಹೇಳುವುದರ ಜೊತೆಗೆ ಸರ್ಕಾರದ ಎಲ್ಲ ಸೌಲಭ್ಯ ಹಾಗೂ ನೆರವುಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಮಹಿಳೆಯರ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವು ಯೋಜನೆ, ಕಾಯ್ದೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ. ಸರ್ಕಾರದ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳ ವೈಯಕ್ತಿಕ ಬೆಳವಣಿಗೆ ಮತ್ತು ಉತ್ತಮ ಭವಿಷ್ಯಕ್ಕೆ ಪೂರಕವಾಗಿರುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ವಾತಾವರಣ ಕಲ್ಪಿಸಬೇಕು. ಅವರ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಮಹಿಳೆಯರು ಸ್ವಾವಲಂಬಿಗಳಾಗಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಯೋಜನೆಗಳನ್ನು ತಲುಪಿಸಬೇಕು. ಮಹಿಳೆಯರ ದುಡಿಯುವ ಶಕ್ತಿ ಹಾಗೂ ಜೀವನಮಟ್ಟ ಸುಧಾರಣೆಗೆ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಮೇಲ್ನೋಟಕ್ಕೆ ಇಲ್ಲದಿದ್ದರೂ ಎಚ್ಚರವಾಗಿರಬೇಕು. ಬಾಲ್ಯ ವಿವಾಹದಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ಕುಂಠಿತವಾಗುವ ಬಗ್ಗೆ ಜಿಲ್ಲೆಯಾದ್ಯಂತ ಅರಿವು ಮೂಡಿಸಿ, ಬಾಲ್ಯ ವಿವಾಹ ಮುಕ್ತ ಸಮಾಜಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ ಎಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಎಎಸ್‌ಪಿ ಸಿದ್ಧಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವೀಣಾ ವಿವೇಕಾನಂದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.