ADVERTISEMENT

ಉಡುಪಿ: ಕೃಷಿ ಸಾಲ ಪಡೆದವರು 30,940 ರೈತರು ಮಾತ್ರ

ಫೆ.8ರಿಂದ 24ರವರೆಗೆ ಜಿಲ್ಲೆಯಲ್ಲಿ ಕೃಷಿ ಸಾಲ ಅಭಿಯಾನ: ಜಿಲ್ಲಾಧಿಕಾರಿ ಜಿ.ಜಗದೀಶ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 11:31 IST
Last Updated 7 ಫೆಬ್ರುವರಿ 2020, 11:31 IST
ಜಿ. ಜಗದೀಶ್‌
ಜಿ. ಜಗದೀಶ್‌   

ಉಡುಪಿ: ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಗ್ರಾಮೀಣ, ಜಿಲ್ಲಾ ಸಹಕಾರ ಹಾಗೂ ಖಾಸಗಿ ಬ್ಯಾಂಕ್‍ಗಳುಫೆ.8ರಿಂದ 24ರವರೆಗೆ ಕೃಷಿ ಸಾಲ ಅಭಿಯಾನ ಹಮ್ಮಿಕೊಂಡಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಲಹೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 1,34,217 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 30,940 ರೈತರು ಮಾತ್ರ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿದ್ದಾರೆ. ಬಾಕಿ 1,03,277 ರೈತರು ಸಾಲ ಪಡೆದಿಲ್ಲ.

ಯಾವ ಕಾರಣಕ್ಕೆ ರೈತರು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ, ರೈತರಿಗೆ ಸಾಲ ಸಿಗುತ್ತಿಲ್ಲವೇ, ಗ್ರಾಮೀಣ ಭಾಗಕ್ಕೆ ಸಾಲ ಸೌಲಭ್ಯ ತಲುಪುತ್ತಿಲ್ಲವೇ ಎಂಬುದನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ, ಸಾಲ ಅಗತ್ಯವಿರುವ ರೈತರಿಗೆ ಸಾಲ ಕೊಡಿಸಲು ಕೃಷಿ ಸಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಸಾಲ ಮಂಜೂರು ಪ್ರಕ್ರಿಯೆಯಲ್ಲಿ ವಿಳಂಬ ಮಾಡದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಸಮಸ್ಯೆಗಳು ಎದುರಾದರೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್‌ ರುದ್ರೇಶ್ (9449860858) ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್‌ (8277932501) ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ಶೇ 7ರ ಬಡ್ಡಿದರ

ಕೃಷಿ ಸಾಲದ ಮೇಲೆ ಬ್ಯಾಂಕ್‌ಗಳು ಶೇ 7ರ ಬಡ್ಡಿ ದರ ವಿಧಿಸುತ್ತವೆ. ₹ 3 ಲಕ್ಷದವರೆಗೂ ಪ್ರಾಸೆಸಿಂಗ್ ಶುಲ್ಕ ಡ್ಯಾಕ್ಯುಮೆಂಟ್‌ ಶುಲ್ಕವನ್ನು ಪಡೆಯುವುದಿಲ್ಲ. ರೈತರು ಪಡೆದ ಸಾಲಕ್ಕೆ ನಿಯಮಿತವಾಗಿ ಬಡ್ಡಿ ಪಾವತಿಸಿದರೆ ಕೇಂದ್ರ ಸರ್ಕಾರವೇ ಶೇ 3ರಷ್ಟು ಬಡ್ಡಿ ಪಾವತಿಸಲಿದೆ. ಒಟ್ಟಾರೆ ಶೇ 4ರ ಬಡ್ಡಿದರದಲ್ಲಿ ರೈತರಿಗೆ ಕೃಷಿಸಾಲ ಲಭ್ಯವಾಗುತ್ತದೆ ಎಂದು ಲೀಡ್ ಬ್ಯಾಂ‌ಕ್ ಮ್ಯಾನೇಜರ್ ರುದ್ರೇಶ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಲೀಡ್‍ಬ್ಯಾಂಕ್ ಮೆನೇಜರ್ ರುದ್ರೇಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ಉಪಸ್ಥಿತರಿದ್ದರು.

ದಂಧೆಕೋರರ ವಿರುದ್ಧ ಕ್ರಮ: ಡಿಸಿ

ಜಿಲ್ಲೆಯಲ್ಲಿ 4 ಲಕ್ಷ ಮೆಟ್ರಿಕ್ ಟನ್‌ ಮರಳು ತೆಗೆಯಲಾಗಿದ್ದರೂ, ಜನಸಾಮಾನ್ಯರ ಬೇಡಿಕೆ ಕಡಿಮೆಯಾಗದಿರುವುದು ಅನುಮಾನ ಹುಟ್ಟಿಸಿದೆ. ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಮಾಹಿತಿ ಇದ್ದು, ಅನಧಿಕೃತ ದಾಸ್ತಾನು ಕೇಂದ್ರಗಳ ಮೇಲೆ ದಾಳಿ ನಡೆಸಿ, ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ಲಾರಿಗಳ ಜಿಪಿಎಸ್‌ ರೀಡಿಂಗ್ ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಮತ್ತೆ, 4 ಲಕ್ಷ ಮೆಟ್ರಿಕ್‌ ಟನ್‌ ಮರಳು ತೆಗೆಯಲು ಕೆಸಿಝೆಡ್‌ಎಂಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಕೂಡಲೇ ಮರಳು ತೆಗೆಯುವ ಪ್ರಕ್ರಿಯೆ ಆರಂಭವಾಗಲಿದೆ. ಸದ್ಯ ಮರಳು ಲಭ್ಯವಿಲ್ಲ ಎಂದು ಜಿ.ಜಗದೀಶ್‌ ತಿಳಿಸಿದರು.

‘ಹಣ ಕೊಟ್ಟು ಮೋಸ ಹೋಗಬೇಡಿ’

ಮೈಕ್ರೋಫೈನಾನ್ಸ್‌ಗಳು ಆರ್‌ಬಿಐ ವ್ಯಾಪ್ತಿಗೊಳಪಡುವುದರಿಂದ ಈ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಕ್ಕೆ ಋಣಮುಕ್ತ ಕಾಯ್ದೆ ಅನ್ವಯವಾಗುವುದಿಲ್ಲ. ಆದರೆ, ಆರ್‌ಬಿಐ ನಿಯಮಗಳಿಗೆ ಬದ್ಧವಾಗಿ ಸಾಲ ವಸೂಲಾತಿ ಮಾಡುವಂತೆ ಮೈಕ್ರೋಫೈನಾನ್ಸ್‌ಗಳಿಗೆ ಸೂಚಿಸಲಾಗಿದೆ. ಸಾಲ ಮನ್ನಾ ಆಗುತ್ತದೆ ಎಂದು ನಂಬಿ ಹಣ ಕೊಟ್ಟ ವಂಚನೆಗೊಳಗಾಗಬೇಡಿ. ಋಣಮುಕ್ತ ಕಾಯ್ದೆ ಜಾರಿ ವಿಚಾರ ನ್ಯಾಯಾಲಯದಲ್ಲಿದ್ದು, ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.