ADVERTISEMENT

ರಕ್ಷಣೆ ನೀಡದ ಡಿಸಿ, ಎಸ್ಪಿ ಅಮಾನತಿಗೆ ಆಗ್ರಹ

ದಲಿತ ವಿದ್ಯಾರ್ಥಿಗಳ ಸರಣಿ ಅತ್ಯಾಚಾರ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 14:50 IST
Last Updated 10 ಜುಲೈ 2019, 14:50 IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ದಲಿತ ವಿದ್ಯಾರ್ಥಿಗಳ ಸರಣಿ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಉಡುಪಿ ಅಂಬೇಡ್ಕರ್‌ ಯುವಸೇನೆ ವತಿಯಿಂದ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಪ್ರತಿಭಟನೆ ನಡೆಯಿತು.ಪ್ರಜಾವಾಣಿ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ದಲಿತ ವಿದ್ಯಾರ್ಥಿಗಳ ಸರಣಿ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಉಡುಪಿ ಅಂಬೇಡ್ಕರ್‌ ಯುವಸೇನೆ ವತಿಯಿಂದ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಪ್ರತಿಭಟನೆ ನಡೆಯಿತು.ಪ್ರಜಾವಾಣಿ ಚಿತ್ರ   

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ದಲಿತ ವಿದ್ಯಾರ್ಥಿಗಳ ಸರಣಿ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಉಡುಪಿ ಅಂಬೇಡ್ಕರ್‌ ಯುವಸೇನೆ ವತಿಯಿಂದ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಮುಖಂಡ ಜಯನ್‌ ಮಲ್ಪೆ ಮಾತನಾಡಿ, ಬುದ್ಧಿವಂತರ ಜಿಲ್ಲೆಯೆಂದು ಕರೆಯಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಒಂದೇ ತಿಂಗಳಲ್ಲಿ ಮೂರು ದಲಿತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ದಲಿತರಿಗೆ ರಕ್ಷಣೆ ಹಾಗೂ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಆಗದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿಗೆ ಅಮಲು ಪದಾರ್ಥ ನೀಡಿದ್ದರೂ ಸಹ ಪೊಲೀಸ್‌ ವರಿಷ್ಠಾಧಿಕಾರಿ, ಸಂತ್ರಸ್ತೆಯಿಂದ ಅಮಲು ಪದಾರ್ಥ ಸೇವಿಸಿಲ್ಲ ಎಂದು ಬರೆಸಿಕೊಂಡಿದ್ದಾರೆ. ಇದು ತನಿಖೆಯ ದಿಕ್ಕು ತಪ್ಪಿಸಿ, ಆರೋಪಿಗಳನ್ನು ರಕ್ಷಣೆ ಮಾಡಲು ಮಾಡಿದ ಷಡ್ಯಂತ್ರವಾಗಿದೆ. ಹಾಗಾಗಿ ದಕ್ಷಿಣ ಕನ್ನಡ ಎಸ್ಪಿ ವಿರುದ್ಧ ಕೂಡಲೇ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಂಬೇಡ್ಕರ್‌ ಯುವ ಸೇನೆಯ ಅಧ್ಯಕ್ಷ ಹರೀಶ್‌ ಸಾಲ್ಯಾನ್‌, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಸತೀಶ್‌ ಕಪ್ಪೆಟ್ಟು, ಸಂತೋಷ್‌ ಕಪ್ಪೆಟ್ಟು, ಗುಣವಂತ, ವಾಸು ನೇಜಾರ್‌, ಸುಕೇಶ್‌ ಪೂತ್ತೂರು, ಅಶೋಕ್‌ ಪೂತ್ತೂರು, ಅನಿಲ್‌ ಅಂಬಲಪಾಡಿ, ದಿನೇಶ್‌ ಮೂಡುಬೆಟ್ಟು, ಪ್ರಕಾಶ್‌ ಬ್ರಹ್ಮಾವರ, ಗಣೇಶ್‌ ನೇರ್ಗಿ, ನಾಗೇಶ್‌ ಉದ್ಯಾವರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.