ADVERTISEMENT

ಕಾರ್ಯಕ್ರಮ ಆಯೋಜಿಸಿದರೆ ಕಠಿಣ ಕ್ರಮ ಖಚಿತ: ಜಿಲ್ಲಾಧಿಕಾರಿ

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಭೆ, ಕಾರ್ಯಕ್ರಮ, ಪ್ರತಿಭಟನೆ: ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 12:25 IST
Last Updated 24 ಜೂನ್ 2021, 12:25 IST
ಜಿ. ಜಗದೀಶ್‌, ಜಿಲ್ಲಾಧಿಕಾರಿ
ಜಿ. ಜಗದೀಶ್‌, ಜಿಲ್ಲಾಧಿಕಾರಿ   

ಉಡುಪಿ: ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂಬ ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಕೆಲವರು ನಿಯಮ ಉಲ್ಲಂಘಿಸಿ ಸಭೆ ಸಮಾರಂಭ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಂಡುಬಂದಿದೆ. ಮುಂದೆ ಯಾರೇ ಕಾರ್ಯಕ್ರಮ ಆಯೋಜಿಸಿದರೂ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಲಾಕ್‌ಡೌನ್ ನಿಯಮ ಸಡಿಲವಾದ ಕೂಡಲೇ ರಾಜಕೀಯ ನಾಯಕರು, ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಪ್ರತಿಭಟನೆಗಳು ನಡೆಯುತ್ತಿವೆ. ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತದಿಂದ ಕೂಡ ಅನುಮತಿ ನೀಡಲು ಸಾಧ್ಯವಿಲ್ಲದಿರುವಾಗ ಯಾರಿಂದ ಅನುಮತಿ ಪಡೆದು ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಸಣ್ಣವರಿಗೂ, ದೊಡ್ಡವರಿಗೂ ಒಂದೇ ಆಗಿದ್ದು, ಪ್ರತಿಯೊಬ್ಬರೂ ಸರ್ಕಾರದ ಆದೇಶ ಪಾಲಿಸಲೇಬೇಕು. ಜನಸಾಮಾನ್ಯರು ಇರಲಿ, ರಾಜಕೀಯ ನಾಯಕರೇ ಇರಲಿ ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮದುವೆಗಳಲ್ಲಿ 40 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ ಇದ್ದರೂ ಹೆಚ್ಚು ಜನ ಸೇರುತ್ತಿದ್ದಾರೆ. ಬಸ್‌ಗಳಲ್ಲಿ ಆಸನ ಸಾಮರ್ಥ್ಯದ ಶೇ 50ರಷ್ಟು ಸೀಟುಗಳಲ್ಲಿ ಕುಳಿತು ಪ್ರಯಾಣಿಸಲು ಅನುಮತಿ ಇದ್ದರೂ ಹೆಚ್ಚು ಪ್ರಯಾಣಿಕರನ್ನು ತುಂಬಿಸಲಾಗುತ್ತಿದೆ. ಹೋಟೆಲ್‌ಗಳಲ್ಲಿ ಕುಳಿತು ತಿನ್ನಲು ಸಂಜೆ 5ರವರೆಗೆ ಅವಕಾಶವಿದ್ದರೂ ಪಾಲನೆ ಮಾಡುತ್ತಿಲ್ಲ. ಕೆಲವರ ಬೇಜವಾಬ್ದಾರಿತನದಿಂದ ಸಾರ್ವಜನಿಕರ ಜೀವಕ್ಕೆ ಆಪತ್ತು ಬರುತ್ತಿದೆ ಎಂದರು.

ಜುಲೈ 7ರವರೆಗೂ ಸರ್ಕಾರ ಅನುಮತಿಸಿರುವ ಚಟುವಟಿಕೆಗಳು ಮಾತ್ರ ನಡೆಯಬೇಕು. ಮಾರ್ಗಸೂಚಿ ಪಾಲಿಸದಿದ್ದರೆ ಎಪಿಡಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.