ADVERTISEMENT

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಮರವಂತೆ ಕಾರು ಅಪಘಾತ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:29 IST
Last Updated 5 ಜುಲೈ 2022, 4:29 IST
ರೋಶನ್ ಆಚಾರ್ಯ
ರೋಶನ್ ಆಚಾರ್ಯ   

ಕುಂದಾಪುರ: ಶನಿವಾರ ರಾತ್ರಿ ಮರವಂತೆ- ತ್ರಾಸಿ ಅರಬ್ಬಿ ಕಡಲ ಕಿನಾರೆ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಕಾರು ಅಪಘಾತದ ವೇಳೆ ನಾಪತ್ತೆಯಾಗಿದ್ದ ಕಾರಿನ ಸಹ ಸವಾರ ಕಾಡಿನಕೊಂಡ ನಿವಾಸಿ ನಾರಾಯಣ ಆಚಾರ್ಯ ಅವರ ಪುತ್ರ ರೋಶನ್ ಆಚಾರ್ಯ (24) ಅವರ ಮೃತದೇಹ ಸೋಮವಾರ ಸಂಜೆ ಹೊಸಾಡು ಗ್ರಾಮದ ಕಂಚುಗೋಡು ಸಮುದ್ರತೀರದಲ್ಲಿ ಪತ್ತೆಯಾಗಿದೆ.

ಶನಿವಾರ ತಡರಾತ್ರಿ ತನ್ನ‌ ಸ್ನೇಹಿತ ವಿರಾಜ್ ಕಾರಿನಲ್ಲಿ ಇಬ್ಬರು ಗೆಳೆಯರೊಡನೆ ರೋಶನ್ ಅವರು ಕುಂದಾಪುರದಿಂದ ಬೈಂದೂರಿನತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಕಾರು ಮರವಂತೆ ರಾಷ್ಟ್ರೀಯ ಹೆದ್ದಾರಿ ಬಳಿ ಚಾಲಕನ ನಿಯಂತ್ರಣ ತಪ್ಪಿ 40 ಅಡಿಯ ದೂರದ ಅರಬ್ಬಿಯ ಸಮುದ್ರಕ್ಕೆ ಉರುಳಿ ಬಿದ್ದಿತ್ತು. ಈ ವೇಳೆ ಕಾರಿನ ಹಿಂಬದಿಯ ಬಾಗಿಲು ತೆರೆದ ಕಾರಣ ಹಿಂಬದಿಯಲ್ಲಿ ಕುಳಿತಿದ್ದ ಸಂದೇಶ್ ಹಾಗೂ ಕಾರ್ತಿಕ್ ಹೊರಗೆಸೆಯಲ್ಪಟ್ಟು ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದರು.

ಎದುರು ಭಾಗದಲ್ಲಿ ಕುಳಿತಿದ್ದ ಚಾಲಕ ವಿರಾಜ್ ಹಾಗೂ ರೋಶನ್ ಕಾರಿನೊಳಗೆ ಸಿಲುಕಿಕೊಂಡು ನೀರು ಪಾಲಾಗಿದ್ದರು. ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಕಾರನ್ನು ಮೇಲಕ್ಕೆತ್ತಿದ್ದಾಗ ಅದರಲ್ಲಿ ವಿರಾಜ್ ಅವರ ಮೃತದೇಹ ಸೀಟ್ ಬೆಲ್ಟ್ ಧರಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರೋಶನ್ ಅವರ ನಾಪತ್ತೆಯಾಗಿದ್ದು, ಅವರ ಕುರುಹು ದೊರಕಿರಲಿಲ್ಲ.

ADVERTISEMENT

ಸತತ ಹುಡುಕಾಟ: ನಾಪತ್ತೆಯಾಗಿರುವ ರೋಶನ್‌ಗಾಗಿ ಮುಳುಗು ತಜ್ಞರಾದ ಈಶ್ವರ ಮಲ್ಪೆ, ದಿನೇಶ್ ಖಾರ್ವಿ ಹಾಗೂ ಸ್ಥಳೀಯ ಮೀನುಗಾರರ ಸಹಕಾರದಿಂದ ಭಾನುವಾರ ಬೆಳಿಗ್ಗೆಯಿಂದ ಸತತ ಹುಡುಕಾಟ ನಡಸಲಾಗಿತ್ತು. ಸೋಮವಾರ ಸಂಜೆಯ ವೇಳೆಗೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಕಂಚುಗೋಡು ಕಡಲ ಕಿನಾರೆಯಲ್ಲಿ ಮೃತ ದೇಹ ಪತ್ತೆಯಾಗಿದೆ‌.

ಗಂಗೊಳ್ಳಿ ಠಾಣಾಧಿಕಾರಿ ವಿನಯಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.