ಉಡುಪಿ: ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್‌ಗಳಿಗೆ ಮೇಲ್ದರ್ಜೆಗೇರಿಸುವ ನಿರ್ಣಯವನ್ನು ಕೆಡಿಪಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಸಂಪುಟದಲ್ಲಿ ಅಂಗೀಕರಿಸುವ ಕುರಿತು ಶೀಘ್ರವೇ ಆರೋಗ್ಯ ಸಚಿವ ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ತಿಳಿಸಿದರು.
ಜಿಲ್ಲಾ ಆಸ್ಪತ್ರೆಗೆ ಬೇಕಾಗುವ ಅನುದಾನವನ್ನುಈ ಬಾರಿಯ ಬಜೆಟ್‌ನಲ್ಲಿ ತೆಗೆದಿರಿಸಲಾಗುವುದು. ಆಸ್ಪತ್ರೆಗೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ ಎಂದರು.
ಭೂಸ್ವಾಧೀನಕ್ಕೆ ಸೂಚನೆ
ವರಾಹಿ ಯೋಜನೆ ಜಾರಿಗೆ ಭೂಸ್ವಾಧೀನ ಪ್ರಕ್ರಿಯೆ ಅಡ್ಡಿಯಾಗಿದ್ದು, ಅದನ್ನು ನಿವಾರಿಸವಂತೆ ಭೂಸ್ವಾಧೀನ ಇಲಾಖೆ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ವಿಚಾರದಲ್ಲಿ ಪೂರ್ಣ ಮಾಹಿತಿ ಇಲ್ಲ. ಕಾರ್ಖಾನೆ ನಡೆಯುತ್ತಿದ್ದಾಗ ಕಬ್ಬಿನ ಕೊರತೆ ಇತ್ತು. ಕಾರ್ಖಾನೆ ಬಂದ್ ಆದ ಬಳಿಕ ರೈತರು ಕಬ್ಬು ಬೆಳೆಯುತ್ತಿರುವ ಮಾಹಿತಿ ಸಿಕ್ಕಿದೆ. ಕಾರ್ಖಾನೆ ಆರಂಭಕ್ಕೆ ಸಾಧ್ಯತೆಗಳ ಕುರಿತು ಚರ್ಚಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ಹೂಳೆತ್ತಲು ನಿರ್ಧರಿಸಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಂಡಿ ಅಣೆಕಟ್ಟೆಗಳ ಹೂಳನ್ನು ಇಒಗಳು ಹಾಗೂ ನಗರ ಪ್ರದೇಶಗಳ ಕಿಂಡಿ ಅಣೆಕಟ್ಟುಗಳ ಹೂಳನ್ನು ಪೌರಾಯುಕ್ತರ ಎತ್ತಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಹೂಳೆತ್ತುವಾಗ ಸಿಗುವ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿ ಮರಳು ಹರಾಜಿನಿಂದ ಸಿಗುವ ₹ 80ರಿಂದ 90 ಲಕ್ಷ ಆದಾಯವನ್ನು ಹೂಳೆತ್ತುವ ಕಾಮಗಾರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಿಆರ್‌ಝೆಡ್ ಹಾಗೂ ನಾನ್ ಸಿಆರ್‌ಝೆಡ್ ವ್ಯಾಪ್ತಿಲ್ಲಿ ಮರಳುಗಾರಿಕೆ ನಡೆಸುವ ಕುರಿತು ಮುಂದಿನ ವಾರ ಅರಣ್ಯ, ಪರಿಸರ ಹಾಗೂ ಗಣಿ ಇಲಾಖೆ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಕಲ್ಲಿನ ಕ್ವಾರಿಗಳ ಕಾರ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿರುವ ವಿಚಾರವೂ ಸಭೆಯಲ್ಲಿ ಚರ್ಚೆಯಾಗಲಿದ್ದು, ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.
2018–19ರಲ್ಲಿ ವಸತಿ ಯೋಜನೆಯಡಿ ಬಡವರು ಕಟ್ಟಿಕೊಂಡಿರುವ ಮನೆಗಳಿಗೆ ಬಾಕಿ ಹಣ ಪಾವತಿಯಾಗಿಲ್ಲ. 2019–20ರ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಬುಧವಾರ ವಸತಿ ಸಚಿವರು ಉಡುಪಿಗೆ ಭೇಟಿ ನೀಡುತ್ತಿದ್ದು, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಎರಡು ಹಾಗೂ ಮೂರನೇ ಕಂತಿನ ಹಣ ಬಿಡುಗಡೆಯಾಗಿದ್ದು, ಶೀಘ್ರವೇ ನಾಲ್ಕನೇ ಕಂತಿನ ಹಣವೂ ಬಿಡುಗಡೆಯಾಗಲಿದೆ.
ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದ್ದು 2018–19ರಲ್ಲಿ ಮಂಜೂರಾದ ಬೋರ್‌ವೆಲ್‌ಗಳನ್ನು ಈಗ ಕೊರೆಸಲಾಗುತ್ತಿದೆ. 2019–20ರ ಕಾಮಗಾರಿಯೇ ಶುರುವಾಗಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚಿಸಲಾಗಿದ್ದು, ಮಾರ್ಚ್ 31ರೊಳಗೆ ಕಳೆದ ಸಾಲಿನ ಎಲ್ಲ ಕಾಮಗಾರಿಗಳು ಮುಗಿಸಬೇಕು, ಹೊಸ ಕಾಮಗಾರಿ ಆರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಸಾಮಾಜಿಕ ಯೋಜನೆಗಳಡಿ ಬಾಕಿ ಇರುವ ಪಿಂಚಣಿ ಬಿಡುಗಡೆ, ಜಿಲ್ಲೆಯಲ್ಲಿ ಬಾಕಿಇರುವ 3000 ಪಡಿತರ ಕಾರ್ಡ್‌ಗಳ ವಿಲೇವಾರಿಗೆ ಆದೇಶ ನೀಡಲಾಗಿದೆ. ₹ 20 ಕೋಟಿ ಅತಿವೃಷ್ಟಿ ಪರಿಹಾರ ಬಿಡುಗಡೆಯಾಗಿದ್ದು, 1,191 ರೈತರಿಗೆ ನೀಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನೆರಯಿಂದ ಜಿಲ್ಲೆಯಲ್ಲಿ ‘ಎ’ ಕೆಟಗರಿಯಲ್ಲಿ 46, ‘ಬಿ’ ಕೆಟಗರಿಯಲ್ಲಿ 144, ‘ಸಿ’ ಕೆಟಗರಿಯಲ್ಲಿ 412 ಮನೆಗಳಿಗೆ ಹಾನಿಯಾಗಿದ್ದು, ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಿಂದ ಮನೆ ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡಲಾಗುವುದು ಎಂದರು.
ಈ ಸಂದರ್ಭ ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.