ಉಡುಪಿ: ‘ಧರ್ಮಸ್ಥಳ ಪ್ರಕರಣದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದ ಒಳಗೆ ಮತ್ತು ಹೊರಗೆ ನೀಡಿರುವ ಹೇಳೀಕೆಗೆ ನನ್ನ ಸಹಮತವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಹೇಳಿದರು.
ಸುದ್ದಿಗಾರರ ಜೊತೆ ಇಲ್ಲಿ ಮಾತನಾಡಿದ ಅವರು, ‘ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು. ವೀರೇಂದ್ರ ಹೆಗ್ಗಡೆ ಅವರು ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಅನ್ನ ಪ್ರಸಾದ ನೀಡುತ್ತಿದ್ದಾರೆ. ಅದು ನಿಜವಾಗಿಯೂ ನಮಗೆಲ್ಲ ಆದರ್ಶ’ ಎಂದರು.
‘ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷೇತ್ರ ಮತ್ತು ಧರ್ಮಾಧಿಕಾರಿ ವಿರುದ್ಧ ಅವಹೇಳನ ನಡೆದಿದೆ. ಸೌಜನ್ಯಳಿಗೆ ನಿಜವಾಗಿ ಅನ್ಯಾಯ ಆಗಿದ್ದರೆ ನ್ಯಾಯ ಸಿಗಬೇಕು. ಸಾಕ್ಷಿ ದೂರುದಾರ ಬೇರೆ ಬೇರೆ ಸ್ಥಳ ಗುರುತಿಸಿದ್ದಾನೆ. ಇದಕ್ಕೆ ಉತ್ತರ ಸಿಗಬೇಕು ಎಂದೇ ಎಸ್‌ಐಟಿ ರಚನೆಯಾಗಿದೆ’ ಎಂದರು.
‘ಸೋಮವಾರ ಗೃಹಸಚಿವರಿಂದ ಉತ್ತರ’: ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ‘ಧರ್ಮಸ್ಥಳ ಬೆಳವಣಿಗೆ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಅವರು ಸೋಮವಾರ ಸದನದಲ್ಲಿ ಉತ್ತರಿಸಲಿದ್ದಾರೆ. ಮುಖ್ಯಮಂತ್ರಿ ಅವರೂ ಈ ಬಗ್ಗೆ ಮಾತನಾಡುವ ಸಾಧ್ಯತೆ ಇದೆ’ ಎಂದರು.
ಎಸ್‌ಐಟಿಯವರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದ ಪಾವಿತ್ರ್ಯಕ್ಕೆ ಎಲ್ಲೂ ಧಕ್ಕೆಯಾಗಿಲ್ಲ. ಬಿಜೆಪಿಯವರು ಬೇಕಂತಲೇ ವಿಷಯವನ್ನು ತಿರುಚುತ್ತಿದ್ದಾರೆ. ಈ ಮೂಲಕ ಧರ್ಮಸ್ಥಳದ ಹೆಸರನ್ನು ಅವರೇ ಹಾಳು ಮಾಡುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.