ಕಾರ್ಕಳ: ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯ, ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರಲಾಗುತ್ತಿದೆ ಎಂದು ಖಂಡಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಆಶ್ರಯದಲ್ಲಿ ತಾಲ್ಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ಎದುರಿನ ಮೈದಾನದಲ್ಲಿ ಬುಧವಾರ ಜನಾಗ್ರಹ ಸಭೆ ನಡೆಯಿತು.
‘ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ದಬ್ಬಾಳಿಕೆ ಎದುರಿಸಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು’ ಎಂದು ವಿವಿಧ ಮಠಾಧೀಶರು, ಪ್ರಮುಖರು ಕರೆ ನೀಡಿದರು.
ಕಾರ್ಕಳ ದಾನಶಾಲೆ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಪುಣ್ಯಕ್ಷೇತ್ರದ ವಿರುದ್ಧ ಬಹಳ ವರ್ಷಗಳಿಂದ ಅಪವಾದಗಳು ಬಂದಿರಲಿಲ್ಲ. ಕ್ಷೇತ್ರವನ್ನು ಎರಡು ಶಕ್ತಿಗಳು ರಕ್ಷಿಸುತ್ತಿವೆ ಮತ್ತು ದುಷ್ಟರನ್ನು ಸಂಹರಿಸುತ್ತವೆ. 800 ವರ್ಷಗಳ ಸುದೀರ್ಘ ಪರಂಪರೆಗೆ ಅವಹೇಳನ ಯೋಗ್ಯವಲ್ಲ ಎಂದರು.
ಸೋಲೂರು ಮಠದ ಆರ್ಯ ಈಡಿಗ ಪೀಠದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯನ್ನು ಧರ್ಮಸ್ಥಳ ಕ್ಷೇತ್ರ ಕಾಪಾಡಿಕೊಂಡು ಬಂದಿದೆ. ದುಷ್ಕೃತ್ಯ ಮಾಡುವವರಿಗೆ ದೇವರು ಶಿಕ್ಷೆ ಕೊಡುತ್ತಾನೆ. ಪಾಶ್ಚಾತ್ಯ ಸಂಸ್ಕೃತಿ ನಮ್ಮ ಮೇಲೆ ಅಪಾಯ ತರುತ್ತಿದ್ದು, ನಾವೆಲ್ಲರೂ ಜಾಗೃತರಾಗಬೇಕು ಎಂದರು.
ಸಭೆ ಉದ್ಘಾಟಿಸಿದ ಮಂಗಳೂರಿನ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ದುಷ್ಟಶಕ್ತಿಗಳು ಧಾರ್ಮಿಕ ಕೇಂದ್ರಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಇದನ್ನು ತೊಳೆಯುವ ಕೆಲಸವನ್ನು ಪಕ್ಷಾತೀತ, ಜಾತ್ಯತೀತವಾಗಿ ಮಾಡಬೇಕು. ಈಗಲೇ ಸಂಘಟಿತರಾಗದಿದ್ದರೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆ ಎದುರಾಗಲಿದೆ ಎಂದರು.
ವೇದಿಕೆಯ ಸಂಚಾಲಕ ಡಾ.ರವೀಂದ್ರ ಶೆಟ್ಟಿ ಬಜಗೋಳಿ ನೇತೃತ್ವ ವಹಿಸಿದ್ದರು. ಶಾಸಕ ವಿ. ಸುನಿಲ್ ಕುಮಾರ್, ಕೇರಳದ ಹಿಂದೂ ಐಕ್ಯ ವೇದಿಕೆಯ ರವೀಶ್ ತಂತ್ರಿ ಕುಂಟಾರು, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಶ್ಯಾಮಲಾ ಕುಂದರ್, ಉದ್ಯಮಿ ಬೋಳ ಪ್ರಭಾಕರ ಕಾಮತ್, ವಕೀಲ ಎಂ.ಕೆ. ವಿಜಯ ಕುಮಾರ್ ಮಾತನಾಡಿದರು. ಗಣಪತಿ ಹೆಗ್ಡೆ, ಸುನಿಲ್ ಕುಮಾರ್ ಶೆಟ್ಟಿ, ಪ್ರಮುಖರು ಭಾಗವಹಿಸಿದ್ದರು. ಪತ್ರಕರ್ತ ಉದಯ್ ಕುಮಾರ್ ಹೆಗ್ಡೆ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.