ADVERTISEMENT

ಆಂಬುಲೆನ್ಸ್‌ನಲ್ಲಿ ಹೆರಿಗೆ, ಗರ್ಭಿಣಿಯ ಗೋಳಾಟ ! ಅಣಕು ಪ್ರದರ್ಶನ

ಗುಂಡಿ ಬಿದ್ದ ಇಂದ್ರಾಳಿ ರೈಲು ನಿಲ್ದಾಣ ರಸ್ತೆಯ ದುರಸ್ಥಿಗೆ ಅಣಕು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:23 IST
Last Updated 25 ನವೆಂಬರ್ 2022, 14:23 IST
Social activist Nityananda Olakadu and others stage a mock protest against poor condition of the road from Udupi's Indrali Bridge to the railway station .
Social activist Nityananda Olakadu and others stage a mock protest against poor condition of the road from Udupi's Indrali Bridge to the railway station .   

ಉಡುಪಿ: ಇಂದ್ರಾಳಿ ಮೇಲ್ಸೇತುವೆಯಿಂದ ರೈಲು ನಿಲ್ದಾಣದವರೆಗಿನ ರಸ್ತೆಯಲ್ಲಿ ಬಿದ್ದಿರುವ ಹೊಂಡ ಗುಂಡಿಗಳನ್ನು ಮುಚ್ಚದ ನಗರಸಭೆ ನಿರ್ಲಕ್ಷ್ಯ ಖಂಡಿಸಿ ಉಡುಪಿ ನಾಗರಿಕ ಸೇವಾ ಸಮಿತಿ ಶುಕ್ರವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.

ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವ ಆಂಬುಲೆನ್ಸ್‌ ವಾಹನದಲ್ಲಿ ಹೆರಿಗೆಯಾಗುವ ಸನ್ನಿವೇಶವನ್ನು ಸೃಷ್ಟಿಸಿ, ಗರ್ಭಿಣಿಯ ನರಳಾಟವನ್ನು ಹಾಗೂ ವಾಹನದ ಹೊರಗೆ ಸಂಬಂಧಿಗಳ ಗೋಳಾಟದ ಸನ್ನಿವೇಶವನ್ನು ಸೃಷ್ಟಿಸಿ ಆಡಳಿತ ವ್ಯವಸ್ಥೆಯನ್ನು ಅಣಕಿಸಲಾಯಿತು. ಸಾರ್ವಜನಿಕರು ಗುಂಪುಗಟ್ಟಿ ಅಣಕು ಪ್ರಸಂಗವನ್ನು ವೀಕ್ಷಿಸಿದರು.

ಆಟೊ ಚಾಲಕ ಅಬ್ದುಲ್ ಖಾದರ್ ಮಾತನಾಡಿ, ‘ಇಂದ್ರಾಳಿ ಸೇತುವೆಯಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಗುಂಡಿಗಳು ಬಿದ್ದಿವೆ. ಹೊಂಡದಲ್ಲಿ ಆಟೊಗಳು ಇಳಿದು ಬೇರಿಂಗ್ ಆಕ್ಸೆಲ್‌ಗಳು ಕಟ್ ಆಗುತ್ತಿವೆ. ಪ್ರಯಾಣಿಕರ ಬೆನ್ನಿಗೆ ಪೆಟ್ಟು ಬಿದ್ದು ತೊಂದರೆಗೆ ಸಿಲುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇಂದ್ರಾಳಿ ರೈಲು ನಿಲ್ದಾಣ ರಸ್ತೆ ಹದಗೆಟ್ಟು ಐದಾರು ವರ್ಷಗಳಾಗಿವೆ. ಗುಂಡಿಗಳನ್ನು ಮುಚ್ಚುವಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರೈಲಿನ ಮೂಲಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬರುವ ರೋಗಿಗಳು ಪ್ರಯಾಣಿಸುತ್ತಾರೆ.

ಧಾರ್ಮಿಕ ಕ್ಷೇತ್ರಗಳಿಗೆ ಬರುವ ವೃದ್ಧರು, ಸಾವಿರಾರು ಪ್ರವಾಸಿಗರು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇಲ್ಲಿನ ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸುವ ಹೊರ ಜಿಲ್ಲೆ ಹಾಗೂ ರಾಜ್ಯಗಳ ಜನರು ಅಭಿವೃದ್ಧಿ ಹೊಂದಿದ ಉಡುಪಿಯ ಸ್ಥಿತಿ ಕಂಡು ಅಣಕಿಸುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲಾ ನಾಗರಿಕ ಸೇವಾ ಸಮಿತಿಯ ಮುಖ್ಯಸ್ಥ ನಿತ್ಯಾನಂದ ವಳಕಾಡು ಮಾತನಾಡಿ, ‘ಗುಂಡಿಬಿದ್ದ ರಸ್ತೆಯಿಂದ ಅನಾರೋಗ್ಯ ಪೀಡಿತ ರೋಗಿಗಳಿಗೆ ಹಾಗೂ ಗರ್ಣಿಣಿಯರಿಗೆ ವಾಹನಗಳಲ್ಲಿ ಕುಳಿತು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅವರ ಸಮಸ್ಯೆಯನ್ನು ಅನಾವರಣಗೊಳಿಸಲು ನಾಗರಿಕ ಸಮಿತಿಯು ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದೆ ಎಂದು ತಿಳಿಸಿದರು.

ಅಣಕು ಪ್ರದರ್ಶನದಲ್ಲಿ ರಾಜು ಮತ್ತು ಹರೀಶ್ ನಟಿಸಿದರು. ಪ್ರತಿಭಟನೆಗೆ ರೈಲು ನಿಲ್ದಾಣದ ಆಟೋ ಚಾಲಕರು ಟ್ಯಾಕ್ಸಿಮನ್ ಅಸೋಸಿಯೇಷನ್ ಬೆಂಬಲ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.