ADVERTISEMENT

ನ.5ರಿಂದ ಆರ್‌.ಎ.ಐ.ಡಿ ಕಾರ್ಡ್ ವಿತರಣೆ

ಸಿಟಿ ಬಸ್‌ನಲ್ಲಿ ನಿತ್ಯ ಪ್ರಯಾಣಿಸುವವರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 13:21 IST
Last Updated 2 ನವೆಂಬರ್ 2018, 13:21 IST

ಉಡುಪಿ: ನಗರದ ಸಿಟಿ ಬಸ್‌ಗಳಲ್ಲಿ ನಿತ್ಯದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆರ್‌.ಎ.ಐ.ಡಿ ಕಾರ್ಡ್ ವ್ಯವಸ್ಥೆಯನ್ನು ನ.5ರಿಂದ ಜಾರಿಗೆ ತರಲಾಗುತ್ತದೆ ಎಂದು ಉಡುಪಿ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ಮಣಿಪಾಲ, ಮಲ್ಪೆ, ಸಂತೆಕಟ್ಟೆ, ಅಂಬಲಪಾಡಿ, ಕಡೆಕಾರು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ತೆರಳುವ 45 ಬಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಮಾಸಿಕ ಹಣ ಮುಂಗಡ ಪಾವತಿಸಿ ಆರ್‌.ಎ.ಐ.ಡಿ ಕಾರ್ಡ್ ಪಡೆಯಬಹುದು. ದಿನಕ್ಕೆ ಎಷ್ಟು ಬಾರಿ ಬೇಕಾದರೂ ಸಂಚರಿಸಬಹುದು ಎಂದು ಹೇಳಿದರು.

ಬಸ್‌ಗಳ ಹೊರಭಾಗ ಹಾಗೂ ಒಳಭಾಗದಲ್ಲಿ ಸಿಸಿಬಿ (ಕಂಬೈನ್ಡ್‌ ಸಿಟಿ ಬಸ್‌) ನಾಮಫಲಕ ಅಳವಡಿಸಲಾಗಿರುತ್ತದೆ. ಅಂತಹ ಬಸ್‌ಗಳಲ್ಲಿ ಮಾತ್ರ ಆರ್‌ಎಐಡಿ ಕಾರ್ಡ್‌ ಬಳಸಬಹುದು. ಮುಂದೆ ಎಲ್ಲ ಬಸ್‌ಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗುವುದು ಎಂದರು.

ADVERTISEMENT

ಟಿಕೆಟ್ ರಹಿತ ಪ್ರಯಾಣಕ್ಕೆ ₹ 500 ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ನಿಯಮವನ್ನು ಸಿಟಿ ಬಸ್‌ಗಳಲ್ಲೂ ಕಡ್ಡಾಯವಾಗಿ ಆಳವಡಿಸಲಾಗುವುದು. ಇದಕ್ಕಾಗಿ ತಂಡ ರಚನೆ ಮಾಡಲಾಗುವುದು. ಪ್ರಯಾಣಿಕರು ನೀಡಿದ ಹಣಕ್ಕೆ ಸರಿಯಾದ ಮೌಲ್ಯದ ಟಿಕೆಟ್ ಪಡೆಯಬೇಕು. ಪ್ರಯಾಣದ ಅಂತ್ಯದವರೆಗೂ ಟಿಕೆಟ್‌ ಇಟ್ಟುಕೊಳ್ಳಬೇಕು. ತಪಾಸಣೆಗೆ ಬಂದಾಗ ತೋರಿಸಬೇಕು ಎಂದು ಮನವಿ ಮಾಡಿದರು.

ಸಲಹೆ, ದೂರು ನೀಡಲು ದೂರವಾಣಿ ಸಂಖ್ಯೆ ಹಾಕಲಾಗುತ್ತದೆ. ಬಸ್ಸುಗಳಲ್ಲಿ ತೊಂದರೆಯಾದಲ್ಲಿ ದೂರುನೀಡಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೃಷ್ಣ ಅಂಚನ್, ಕೋಶಾಧಿಕಾರಿ ಚಂದನ್, ಸಮಿತಿ ಸದಸ್ಯ ಸುಧಾಕರ ಕಲ್ಮಾಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.