ADVERTISEMENT

‘ದೀಪಾವಳಿ ಶಾಂತಿ ಸಾಮರಸ್ಯದ ದ್ಯೋತಕ’

ಕಾರ್ಕಳ: ವಿದ್ಯಾರ್ಥಿ ಬಂಧುತ್ವ ವೇದಿಕೆ ಆಶ್ರಯದಲ್ಲಿ ಸೌಹಾರ್ದ ದೀಪಾವಳಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:19 IST
Last Updated 28 ಅಕ್ಟೋಬರ್ 2025, 5:19 IST
ಕಾರ್ಕಳ ಕಾಂಗ್ರೆಸ್ ಕಚೇರಿ ಆವರಣದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಆಶ್ರಯದಲ್ಲಿ ಸೌಹಾರ್ದ ದೀಪಾವಳಿ ಕಾರ್ಯಕ್ರಮ ನಡೆಯಿತು
ಕಾರ್ಕಳ ಕಾಂಗ್ರೆಸ್ ಕಚೇರಿ ಆವರಣದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಆಶ್ರಯದಲ್ಲಿ ಸೌಹಾರ್ದ ದೀಪಾವಳಿ ಕಾರ್ಯಕ್ರಮ ನಡೆಯಿತು   

ಕಾರ್ಕಳ: ‘ದೀಪಾವಳಿ ಹಬ್ಬದಲ್ಲಿ ಸಾಮಾಜಿಕ ನ್ಯಾಯದ ಸಂದೇಶವಿದೆ, ಸೌಹಾರ್ದದ ಸುಗಂಧವಿದೆ. ಶಾಂತಿ– ಸಾಮರಸ್ಯದ ದ್ಯೋತಕವೇ ದೀಪಾವಳಿ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಈಚೆಗೆ ವಿದ್ಯಾರ್ಥಿ ಬಂಧುತ್ವ ವೇದಿಕೆ ಆಶ್ರಯದಲ್ಲಿ ನಡೆದ ಸೌಹಾರ್ದ ದೀಪಾವಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಧಕಾರದಿಂದ ಬೆಳಕಿನೆಡಗೆ ಸಾಗುವ ರೂಪಕವಾದ ದೀಪಾವಳಿ ಹಬ್ಬವು ತಲೆತಲಾಂತರಗಳಿಂದ ಆಚರಿಸಲಾಗುತ್ತಿದೆ ಎಂದರು.

ಪುರಸಭೆ ಮಾಜಿ ಸದಸ್ಯ ಅಶ್ಪಾಕ್ ಅಹಮದ್ ಮಾತನಾಡಿ, ಹಿಂದೆ ನಾವು ಹಿಂದೂ– ಮುಸ್ಲಿಂ– ಕ್ರೈಸ್ತ ಎನ್ನುವ ಭೇದವಿಲ್ಲದೆ ಹಬ್ಬಗಳನ್ನು ಪರಸ್ಪರ ಸಂಭ್ರಮದಿಂದ ಅಚರಿಸಿಕೊಳ್ಳುತ್ತಿದ್ದೆವು. ಆದರೆ ಇಂದು ಕೋಮುವಾದಿ ಶಕ್ತಿಗಳ ಬೆಳವಣಿಗೆಯಿಂದ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂದರು.

ADVERTISEMENT

ಹಿರಿಯ ವಕೀಲ ಶೇಖರ ಮಡಿವಾಳ ಮಾತನಾಡಿ, ಸಂವಿಧಾನ ಎಲ್ಲಾ ಧರ್ಮ, ಜಾತಿಯವರಿಗೆ ಸಮಾನ ಅವಕಾಶಗಳನ್ನು ನೀಡಿದೆ. ಆದರೆ ಸಮಾನತೆ ಬಯಸದ ಶಕ್ತಿಗಳು ಕುತಂತ್ರದಿಂದ ಸಂವಿಧಾನವನ್ನು ಬದಲಿಸಿ ಮನುವಾದ ತರಲು ಕುತಂತ್ರ ನಡೆಸಿವೆ. ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ಕುರಿತು ಜನಜಾಗೃತಿ ನಡೆಸದಿದ್ದಲ್ಲಿ ದೇಶಕ್ಕೆ ಅಪಾಯವಿದೆ ಎಂದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಮಿತಿ ಸದಸ್ಯ ರೋನಾಲ್ಡ್ ಮನೊಹರ್ ಮಾತನಾಡಿ, ಭೂಮಿ ಮೊದಲು, ದೇಶ ಎರಡನೆಯದು. ಧರ್ಮಗಳನ್ನು ಮನುಷ್ಯರೇ ರಚಿಸಿಕೊಂಡಿರುವುದರಿಂದ ಪರಸ್ಪರ ಕಚ್ಚಾಡುವುದು ಅವಿವವೇಕತನ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖಂಡ ಉದಯ ಶೆಟ್ಟಿ ಮುನಿಯಾಲು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನ ಮುಡಿಪಾಗಿಟ್ಟರು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಮುಖ ಸುಧಾಕರ ಕೋಟ್ಯಾನ್ ಭಾಗವಹಿಸಿದ್ದರು. ಮಾನವ ಬಂಧುತ್ವ ವೇದಿಕೆ ಕಾರ್ಕಳ ಘಟಕದ ಸಂಚಾಲಕ ಸುಭಿತ್ ಎನ್.ಆರ್. ಸ್ವಾಗತಿಸಿದರು. ಕರಾವಳಿ ವಿಭಾಗದ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯೆ ನಳಿನಿ ಆಚಾರ್ಯ ನಿರೂಪಿಸಿದರು. ಬೆಳ್ಮಣ್ ನಾಗೇಶ್ ಆಚಾರ್ಯ ಸಂವಿಧಾನ ಪೀಠಿಕೆ ಬೋಧಿಸಿದರು. ವಿದ್ಯಾರ್ಥಿ ಬಂಧುತ್ವ ವೇದಿಕೆಯ ತಾಲ್ಲೂಕು ಪ್ರಮುಖ ನಿಶಾಂತ್ ಶೆಟ್ಟಿಗಾರ್ ವಂದಿಸಿದರು. ಕಾರ್ಯಕ್ರಮದ ಬಳಿಕ ತುಳುನಾಡಿನ ಶೈಲಿಯ ದೀಪಾವಳಿ ಹಬ್ಬದ ವಿಶೇಷ ತಿಂಡಿ ತಿನಿಸುಗಳ ಉಪಹಾರ ಕೂಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.