ADVERTISEMENT

ಆತಂಕ ಬೇಡ, ಸುರಕ್ತಿತವಾಗಿ ಮರಳಲಿದ್ದಾರೆ: ಸಚಿವೆ ಜಯಮಾಲಾ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 14:19 IST
Last Updated 5 ಜನವರಿ 2019, 14:19 IST
ಜಿಲ್ಲಾ ಉಸ್ತುವಾರಿ ಸಚಿವೆ ಜಯಮಲ ಶನಿವಾರ ನಾಪತ್ತೆಯಾದ ಮೀನುಗಾರರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಜಯಮಲ ಶನಿವಾರ ನಾಪತ್ತೆಯಾದ ಮೀನುಗಾರರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು.   

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಭೇಟಿನೀಡಿ ಸಾಂತ್ವನ ಹೇಳಿದರು.

ಕಣ್ಮರೆಯಾಗಿರುವ ಬೋಟ್ ಮಾಲೀಕ ಚಂದ್ರಶೇಖರ್ ಕೋಟ್ಯಾನ್ ಹಾಗೂ ಮೀನುಗಾರ ದಾಮೋದರ್ ನಿವಾಸಕ್ಕೆ ಭೇಟಿನೀಡಿ, ಆತಂಕಪಡಬೇಡಿ, ಮೀನುಗಾರರ ಪತ್ತೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಎಲ್ಲರೂ ಸುರಕ್ಷಿತವಾಗಿ ಮರಳಲಿದ್ದಾರೆ. ಅಲ್ಲಿಯವರೆಗೂ ದೃತಿಗೆಡದೆ ಧೈರ್ಯವಾಗಿರಿ ಎಂದು ಸಚಿವರು ಹೇಳಿದರು.

ಮೀನುಗಾರರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇಟ್ಟಿಕೊಂಡಿರುವ ಬಗ್ಗೆಯೂ ಗುಮಾನಿ ಇದ್ದು, ಎಲ್ಲ ದೃಷ್ಟಿಕೋನಗಳಿಂದಲೂ ಶೋಧಕಾರ್ಯ ನಡೆಯುತ್ತಿದೆ. ಜಿಲ್ಲಾಡಳಿತ ಕೂಡ ಅಗತ್ಯ ಕ್ರಮ ಕೈಗೊಂಡಿದೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮನೆಯವರಿಗೆ ಧೈರ್ಯ ಹೇಳಿದರು.

ADVERTISEMENT

ಕರಾವಳಿ ಕಾವಲು ಪೊಲೀಸ್‌, ಕೋಸ್ಟ್‌ ಗಾರ್ಡ್‌ ಹಾಗೂ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ ಜಾಗೃತಗೊಳಿಸಲಾಗಿದೆ. ತಜ್ಞರನ್ನೊಳಗೊಂಡ ಕಾರ್ಯಪಡೆ ರಚಿಸಿ ಶೋಧ ನಡೆಸಲಾಗುತ್ತದೆ. ನೌಕಾದಳದ ಸಹಾಯ ಪಡೆದುಕೊಳ್ಳಲು ಮಾರ್ಗದರ್ಶನ ನೀಡಲಾಗಿದೆ. ಗೋವಾ, ಮಹಾರಾಷ್ಟ್ರ ಗಡಿಯಲ್ಲಿ ವ್ಯಾಪಕ ಶೋಧ ನಡೆಯುತ್ತಿದೆ ಎಂದರು.

ಈ ಸಂದರ್ಭ ಮೀನುಗಾರ ಮುಖಂಡ ಗಿರೀಶ್‌ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಗೊಂಡಿರುವಾಗ, ಬೋಟ್‌ ಪತ್ತೆ ಮಾಡಲು ಸಾಧ್ಯವಾಗದ ಬಗ್ಗೆ ಬೇಸರವಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಬೇಕು. ರಾಜ್ಯ ಸರ್ಕಾರ ತಕ್ಷಣ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕರಾವಳಿಯ ಶಾಸಕರು, ಸಂಸದರು ಹಾಗೂ ಮಹಾರಾಷ್ಟ್ರ ಸರ್ಕಾರ ಜಂಟಿ ಸಭೆ ನಡೆಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.