ಪಡುಬಿದ್ರಿ: ಇಲ್ಲಿನ ನಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರತ ಉಂಟಾಗಿದ್ದು, ಮಹೇಶ್ವರಿ ಡಿಸ್ಕೊ ಫಂಡ್‌ನ ಮೀನುಗಾರಿಕಾ ಶೆಡ್ ಅಪಾಯದಲ್ಲಿದೆ. 60ಕ್ಕೂ ಹೆಚ್ಚು ಕುಟುಂಬಗಳು ಈ ಶೆಡ್ ಅವಲಂಬಿಸಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಶೆಡ್‌ನಲ್ಲಿ ಶೇಖರಿಸಿಟ್ಟಿದ್ದ 25 ಸಾವಿರ ಲೀಟರ್‌ನಷ್ಟು ಸೀಮೆಎಣ್ಣೆ ಸೇರಿದಂತೆ ₹50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮೀನುಗಾರಿಕಾ ಪರಿಕರಗಳನ್ನು ಮೀನುಗಾರರು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ.
ಶೆಡ್‌ನ ಕೆಲವೇ ಅಡಿಗಳಷ್ಟು ದೂರದಲ್ಲಿ ಕಡಲು ಅಬ್ಬರಿಸುತ್ತಿದೆ. ಕಡಲ್ಕೊರತ ತಡೆಗೆ ಹಾಕಿದ್ದ ಕಲ್ಲುಗಳು ಬೃಹದಾಕಾರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ಒಡಲು ಸೇರುತ್ತಿವೆ. ಇಲ್ಲಿಗೆ ಸಮೀಪದಲ್ಲೇ ‘ಬ್ಲೂ ಫ್ಲ್ಯಾಗ್' ಬೀಚ್ ಸಂಪರ್ಕಿಸುವ ರಸ್ತೆಯೂ ಇದ್ದು, ಕಡಲ್ಕೊರೆತ ಇನ್ನಷ್ಟು ತೀವ್ರಗೊಂಡಲ್ಲಿ ಈ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದರು. ಮೀನುಗಾರರು ನಡಿಪಟ್ಣದ ಭಾಗದ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ‘ಕಡಲ್ಕೊರೆತ ತಡೆಗೆ ತುರ್ತಾಗಿ ಕಲ್ಲುಗಳನ್ನು ಹಾಕುವಂತೆ ಅವರು ಸೂಚಿಸಿದರು. ಶಾಶ್ವತ ತಡೆಗೋಡೆ ನಿರ್ಮಿಸುವ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ತಹಶೀಲ್ದಾರ್ ಪ್ರತಿಭಾ ಆರ್, ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೋಭಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷ ಅಶೋಕ್ ಪಡುಬಿದ್ರಿ, ಗ್ರಾಮ ಪಂಚಾಯಿತಿ ಸದಸ್ಯ ವಿದ್ಯಾಶ್ರೀ, ಸ್ಥಳೀಯರಾದ ಕಿರಣ್ ಇದ್ದರು.
ಕಳೆದ ಭಾರಿ ಈ ಭಾಗದಲ್ಲಿ ಶಾಶ್ವತ ತಡೆಗೋಡೆಗೆ ಅನುದಾನ ಬಿಡುಗಡೆಯಾಗಿತ್ತು. ಇಲ್ಲಿನ ಕಾಮಗಾರಿಯ ಅನುದಾನವನ್ನು ಇನ್ನೊಂದು ಕಡೆ ತಡೆಗೋಡೆ ನಿರ್ಮಾಣಕ್ಕೆ ಬಳಸಲಾಗಿದೆ. ನಡಿಪಟ್ಣದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಒಂದು ಕಡೆ ಸಮುದ್ರ ಇನ್ನೊಂದು ಕಡೆಯಲ್ಲಿ ನದಿ 50 ಮೀಟರ್ ಅಂತರದಲ್ಲಿದೆ. ಸಮುದ್ರ ಕೊರೆತ ತೀವ್ರಗೊಂಡಲ್ಲಿ ಇಡೀ ಊರೇ ಜಲಾವೃತಗೊಳ್ಳಲಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಭಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಲಭಿಸಿಲ್ಲ. ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಮೀನುಗಾರ ನೂತನ್ ಪುತ್ರನ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.