ADVERTISEMENT

Eco Friendly Ganesh Idols | ಉಡುಪಿ: ಗಣಪನ ಆರಾಧನೆಗೆ ಬಗೆ ಬಗೆ ಮೂರ್ತಿ

ಗಣೇಶೋತ್ಸವಕ್ಕೆ ಸಜ್ಜಾಗಿದೆ ನಾಡು: ನಿರ್ಮಾಣಗೊಳ್ಳುತ್ತಿವೆ ಪೆಂಡಲ್‌ಗಳು: ಮೂರ್ತಿಗಳಿಗೆ ಅಂತಿಮ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:33 IST
Last Updated 25 ಆಗಸ್ಟ್ 2025, 6:33 IST
ಉಡುಪಿಯ ಕಿನ್ನಿಮುಲ್ಕಿಯ ಕೌಶಿಕ್‌ ಕುಮಾರ್‌ ಅವರು ಪಂಚಮುಖಿ ಗಣಪತಿಗೆ ಅಂತಿಮ ಸ್ಪರ್ಶ ನೀಡುತ್ತಿರುವುದು
ಉಡುಪಿಯ ಕಿನ್ನಿಮುಲ್ಕಿಯ ಕೌಶಿಕ್‌ ಕುಮಾರ್‌ ಅವರು ಪಂಚಮುಖಿ ಗಣಪತಿಗೆ ಅಂತಿಮ ಸ್ಪರ್ಶ ನೀಡುತ್ತಿರುವುದು   

ಉಡುಪಿ: ವಿಘ್ನ ನಿವಾರಕ ಗಣೇಶನ ಹಬ್ಬ ಸನಿಹವಾಗಿದ್ದು, ಎಲ್ಲೆಲ್ಲೂ ಹಬ್ಬದ ಕಳೆ ಮೂಡಿದೆ. ಗಣಪತಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಕಲಾವಿದರು ತಲ್ಲೀನರಾಗಿದ್ದಾರೆ.

ಪರಿಸರಕ್ಕೆ ಪೂರಕವಾದ ಮೂರ್ತಿಗಳನ್ನೇ ನಿರ್ಮಿಸಬೇಕೆಂಬ ಸೂಚನೆಯಂತೆ ಜಿಲ್ಲೆಯಾದ್ಯಂತ ಆವೆ ಮಣ್ಣಿನಲ್ಲಿ ದೇವರ ಮೂರ್ತಿಗಳು ರೂಪುಗೊಳ್ಳುತ್ತಿವೆ. ಮನೆಗಳಲ್ಲಿ, ಸಾರ್ವಜನಿಕ ಗಣೇಶೋತ್ಸವ ಪೆಂಡಲ್‌ಗಳಲ್ಲಿ ಸ್ಥಾಪನೆ ಮಾಡಲು ವಿವಿಧ ರೂಪದ, ವಿವಿಧ ಗಾತ್ರದ ಆಕರ್ಷಕ ಮೂರ್ತಿಗಳು ಕಲಾವಿದರ ಕೈಗಳಲ್ಲಿ ಅರಳಿವೆ.

ಇತರೆಡೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಹಿಂದಿನಿಂದಲೂ ಪಿಒಪಿ ಮೂರ್ತಿಗಳ ಬಳಕೆ ಇಲ್ಲ. ಇಲ್ಲಿನ ಜನರು ಕೂಡ ಮಣ್ಣಿನ ಮೂರ್ತಿಗಳಿಗೇ ಬೇಡಿಕೆ ಇಡುತ್ತಾರೆ ಎನ್ನುತ್ತಾರೆ ಕಲಾವಿದರು.

ADVERTISEMENT

ಪ್ರತಿವರ್ಷವೂ ಉಡುಪಿ ನಗರ ವ್ಯಾಪ್ತಿಯಲ್ಲಿ ಹಲವು ಮಂದಿ ಕಲಾವಿದರು ಗಣಪತಿ ಮೂರ್ತಿ ನಿರ್ಮಾಣ ಮಾಡುತ್ತಿದ್ದು. ಗಣೇಶ ಚತುರ್ಥಿಗಿಂತ ಹಲವು ತಿಂಗಳ ಮೊದಲಿನಿಂದಲೇ ಮೂರ್ತಿ ನಿರ್ಮಾಣ ಕಾರ್ಯಗಳು ಗರಿಗೆದರುತ್ತವೆ.

ಹಲವು ದಶಕಗಳಿಂದಲೂ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಗಣೇಶೋತ್ಸವ ಸಮಿತಿಗಳಿವೆ. ಇವುಗಳು ಗಣೇಶೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸುತ್ತಿವೆ. ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ನಡೆಸುತ್ತಿವೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿ, ಕಡಿಯಾಳಿ, ಬನ್ನಂಜೆ, ಸರ್ವಿಸ್‌ ಬಸ್‌ ನಿಲ್ದಾಣದ ಬಳಿ, ಕನ್ನೆರ್ಪಾಡಿ, ಅಲೆವೂರು ಮೊದಲಾದೆಡೆ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿಯೂ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಪೆಂಡಾಲ್‌ ನಿರ್ಮಾಣ, ವಿದ್ಯುತ್‌ ದೀಪಗಳ ಅಲಂಕಾರ ಎಲ್ಲವೂ ಭರದಿಂದ ನಡೆದಿದೆ.

ಪೂರಕ ಮಾಹಿತಿ: ವಾಸುದೇವ ಭಟ್‌

ಉಡುಪಿಯ ಕಿನ್ನಿಮುಲ್ಕಿಯ ಕಾರ್ತಿಕ್‌ ಕುಮಾರ್‌ ಅವರು ನಿರ್ಮಿಸಿರುವ ಗಣಪತಿ ಮೂರ್ತಿ
ಅಲೆವೂರಿನ ನಿವೃತ್ತ ಶಿಕ್ಷಕ ಶೇಖರ ಕಲ್ಮಾಡಿ ಅವರು ನಿರ್ಮಿಸಿರುವ ವಿಶ್ರಾಂತಿ ಭಂಗಿಯಲ್ಲಿರುವ ಗಣಪತಿ ಮೂರ್ತಿ
ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆಯ ಗಣೇಶ್ ನಾಯಕ್ ಅವರು ಗಣಪತಿ ಮೂರ್ತಿ ನಿರ್ಮಾಣದಲ್ಲಿ ತಲ್ಲೀನರಾಗಿರುವುದು

ಸಹೋದರರ ಕೈಯಲ್ಲರಳಿದ ಗಣಪ ಉಡುಪಿಯ ಕಿನ್ನಿಮುಲ್ಕಿಯ ಕೌಶಿಕ್‌ ಕುಮಾರ್ ಮತ್ತು ಅವರ ಅಣ್ಣ ಕಾರ್ತಿಕ್‌ ಕುಮಾರ್‌ ಅವರು ಪ್ರತಿವರ್ಷ ಗಣಪತಿ ಮೂರ್ತಿಗಳನ್ನು ನಿರ್ಮಿಸುತ್ತಾರೆ. ನಗರದ ಪ್ರಸಿದ್ಧ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಲ್ಲೊಂದಾದ ಕನ್ನರ್ಪಾಡಿ– ಕಿನ್ನಿಮುಲ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಯನ್ನು ಇವರೇ ನಿರ್ಮಿಸುತ್ತಾರೆ. ಕೌಶಿಕ್‌ ಅವರು ಮಣಿಪಾಲ್ ಟೆಕ್ನಾಲಜಿಯಲ್ಲಿ ಉದ್ಯೋಗಿಯಾಗಿದ್ದು ಅವರ ಅಣ್ಣ ಕಾರ್ತಿಕ್‌ ಎಂಜಿನಿಯರ್‌ ಆಗಿದ್ದಾರೆ. ಇವರು ನಿರ್ಮಿಸುವ ಮೂರ್ತಿಗಳು ಹಾವಂಜೆ ಮಾರುತಿ ವೀಥಿಕಾ ಮೊದಲಾದೆಡೆಗಳಲ್ಲೂ ಪ್ರತಿಷ್ಠಾಪನೆಗೊಳ್ಳುತ್ತಿವೆ. ‘ನಮ್ಮ ತಂದೆ 40 ವರ್ಷಗಳಿಂದ ಗಣೇಶ ವಿಗ್ರಹ ಮಾಡುತ್ತಿದ್ದರು. ಅವರು ಮೂರ್ತಿ ನಿರ್ಮಿಸುವುದು ನೋಡಿ ನಾವು ಕಲಿತೆವು. ತಂದೆಯವರು ನಿಧನರಾದ ಬಳಿಕ ನಾವೇ ಮೂರ್ತಿ ತಯಾರಿಸುತ್ತಿದ್ದೇವೆ. ಪ್ರತಿವರ್ಷ 60ಕ್ಕೂ ಹೆಚ್ಚು ಮೂರ್ತಿಗಳನ್ನು ನಿರ್ಮಿಸಿ ಮಾರಾಟ ಮಾಡುತ್ತೇವೆ. ಈ ಬಾರಿ ಮಂಚಮುಖಿ ಗಣಪತಿ ವಿಗ್ರಹ ನಮ್ಮ ವಿಶೇಷ. ಮೇ ತಿಂಗಳಿನಿಂದಲೇ ನಾವು ಮೂರ್ತಿ ನಿರ್ಮಾಣ ಆರಂಭಿಸುತ್ತೇವೆ’ ’ ಎಂದು ಕೌಶಿಕ್‌ ತಿಳಿಸಿದರು.

ನಿವೃತ್ತ ಶಿಕ್ಷಕ ನಿರ್ಮಿಸಿದ ವಿಶ್ರಾಂತಿ ಗಣಪತಿ ಅಲೆವೂರಿನ ನಿವೃತ್ತ ಶಿಕ್ಷಕ ಶೇಖರ ಕಲ್ಮಾಡಿ ಅವರು ಈ ಬಾರಿ ವಿಶ್ರಾಂತಿ ಭಂಗಿಯಲ್ಲಿರುವ ಗಣಪತಿ ಮೂರ್ತಿ ತಯಾರಿಸಿದ್ದಾರೆ. ಅಲೆವೂರಿನ ಗಿರಿಜಾ ಸರ್ಕಲ್‌ ಬಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿವರ್ಷ ಶೇಖರ ಅವರು ನಿರ್ಮಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸುತ್ತಿದ್ದಾರೆ. ಶೇಖರ ಅವರು ಪ್ರತಿವರ್ಷವೂ ವಿಭಿನ್ನ ಗಣಪತಿ ಮೂರ್ತಿ ನಿರ್ಮಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಈ ಬಾರಿ ಸಾರ್ವಜನಿಕ ಗಣೋಶೋತ್ಸವ ಸಮಿತಿಗಳಿಗಾಗಿ 10 ದೊಡ್ಡ ಗಣಪತಿ ಮೂರ್ತಿ 25 ಸಣ್ಣ ಗಣಪತಿ ಮೂರ್ತಿಗಳನ್ನು ನಿರ್ಮಿಸಿದ್ದೇನೆ. ಆವೆ ಮಣ್ಣಿನ ಮೂರ್ತಿಗಳಿಗೆ ಪರಿಸರಕ್ಕೆ ಮಾರಕವಾಗದ ಬಣ್ಣಗಳನ್ನು ಮಿತವಾದ ಪ್ರಮಾಣದಲ್ಲಿ ಬಳಸಿ ಮೂರ್ತಿ ನಿರ್ಮಿಸುತ್ತೇನೆ’ ಎನ್ನುತ್ತಾರೆ ಅವರು.

ಪರಿಸರ ಪೂರಕ ಮೂರ್ತಿ ಉಡುಪಿಯ ರಮೇಶ್‌ ಕಿದಿಯೂರು ಅವರು ಕಳೆದ 29 ವರ್ಷಗಳಿಂದಲೂ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಗಳನ್ನು ನಿರ್ಮಿಸುತ್ತಿದ್ದಾರೆ. ಸಾರ್ವಜನಿಕ ಗಣೇಶೋತ್ಸವಗಳಿಗಾಗಿಯೇ ಅವರು ಮೂರ್ತಿಗಳ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ‘ಈ ಬಾರಿ ದೊಡ್ಡ ನಾಲ್ಕು ಮೂರ್ತಿಗಳನ್ನು ನಿರ್ಮಿಸಿದ್ದೇನೆ. ಒಂದೊಂದು ಮೂರ್ತಿಗಳು 6 ಅಡಿಗಳಷ್ಟು ಎತ್ತರವಿದೆ’ ಎಂದು ರಮೇಶ್‌ ಕಿದಿಯೂರು ತಿಳಿಸಿದರು.

ಎಣ್ಣೆಹೊಳೆಯ ಗಣೇಶ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ

ಕಾರ್ಕಳ: ತಾಲ್ಲೂಕಿನ ಎಣ್ಣೆಹೊಳೆಯ ಗಣೇಶ್ ನಾಯಕ್ ಅವರು ಹಲವಾರು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಖ್ಯಾತರಾಗಿದ್ದಾರೆ. ಈ ಬಾರಿ ಅವರು ತಯಾರಿಸಿರುವ ಗಣೇಶ ವಿಗ್ರಹಗಳು ಇದೀಗ ಸಾರ್ವಜನಿಕ ಗಣೇಶೋತ್ಸವದ ಸಮಿತಿಗಳ ಪೂಜಾಗ್ರಹಕ್ಕೆ ತೆರಳಲು ಸಿದ್ಧವಾಗಿವೆ. ಎಣ್ಣೆಹೊಳೆ ಆಸುಪಾಸಿನ ಕಾರ್ಕಳ ಹೆಬ್ರಿ ಬಜಗೋಳಿ ಬೈಲೂರು ಅಜೆಕಾರು ಮುನಿಯಾಲು ಸಹಿತ ವಿವಿಧ ಪೇಟೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಇವರು ವಿಗ್ರಹಗಳನ್ನು ನಿರ್ಮಿಸುತ್ತಾರೆ. ಕಾರ್ಕಳ ಮಾತ್ರವಲ್ಲದೆ ಕುಂದಾಪುರ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯಿಂದವೂ ಬೇಡಿಕೆ ಇದೆ ಎನ್ನುತ್ತಾರೆ ಗಣೇಶ್ ನಾಯಕ್. ಇವರ ಕಲೆಗಾರಿಕೆ ಮೆಚ್ಚಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವೆಡೆ ಪುರಸ್ಕಾರಗಳು ದೊರೆತಿವೆ. ‘250ಕ್ಕೂ ಅಧಿಕ ಮೂರ್ತಿಗಳಿಗೆ ಬೇಡಿಕೆ ಇದ್ದು ಮಂಗಳೂರಿನ ಹೆಂಚಿನ ಕಾರ್ಖಾನೆಯಿಂದ ನಾವು ಇದಕ್ಕೆ ಅಗತ್ಯವಿರುವ ಅಂಟು ಮಣ್ಣು ತರಿಸಿಕೊಳ್ಳುತ್ತೇವೆ. ಯಾವುದೇ ರಾಸಾಯನಿಕ ಬಣ್ಣ ಬಳಕೆ ಮಾಡುವುದಿಲ್ಲ. ವರ್ಷದಿಂದ ವರ್ಷಕ್ಕೆ ಮಣ್ಣು ಸಿಗುವುದು ಕಷ್ಟವಾಗುತ್ತಿದೆ. ಸವಾಲಿನ ನಡುವೆಯೂ ಗಣೇಶ ಮೂರ್ತಿ ನಿರ್ಮಾಣ ಕೆಲಸ ನಡೆಯುತ್ತಿದೆ ಎನ್ನುತ್ತಾರೆ ಗಣೇಶ್ ನಾಯಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.