ADVERTISEMENT

ಕಮಲದ ಮೇಲೆ ಕುಂದಾಪುರಕ್ಕೆ ಹೆಚ್ಚು ಪ್ರೀತಿ

ಮೈತ್ರಿಕೂಟಕ್ಕೆ ಚಿಕ್ಕಮಗಳೂರಿನಲ್ಲಿ ಹೆಚ್ಚು ಮತ

ಬಾಲಚಂದ್ರ ಎಚ್.
Published 24 ಮೇ 2019, 19:56 IST
Last Updated 24 ಮೇ 2019, 19:56 IST
ಬಿಜೆಪಿ ಕಾರ್ಯಕರ್ತರ ಸಂಭ್ರಮ
ಬಿಜೆಪಿ ಕಾರ್ಯಕರ್ತರ ಸಂಭ್ರಮ   

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಕಮಲ ಅರಳಿದೆ. ಬಿಜೆಪಿಯ ಗೆಲುವಿನ ಹಿಂದೆ ಯಾವ ವಿಧಾನಸಭಾ ಕ್ಷೇತ್ರ ಎಷ್ಟು ಮತಗಳ ಕೊಡುಗೆ ನೀಡಿವೆ, ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸೋಲಿಗೆ ಕಾರಣವಾದ ಕ್ಷೇತ್ರಗಳು ಯಾವುವು ಎಂಬುದು ಕುತೂಹಲ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪಡೆದ ಮತಗಳು7,18,916. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪಡೆದ ಮತಗಳು3,69,317. ಗೆಲುವಿನ ಅಂತರ ಬರೋಬ್ಬರಿ3,49,599. ಕಳೆದ ಬಾರಿ ಶೋಭಾ ಕರಂದ್ಲಾಜೆ ಗೆಲುವಿನ ಅಂತರ1,81,643.

ಶೋಭಾ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಲು ಕುಂದಾಪುರ ವಿಧಾನಸಭಾ ಕ್ಷೇತ್ರದ ಕೊಡುಗೆ ದೊಡ್ಡದು. ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕುಂದಾಪುರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಅಂದರೆ 1,12,975 ಮತಗಳು ಚಲಾವಣೆಯಾಗಿವೆ.

ADVERTISEMENT

ಕುಂದಾಪುರದಲ್ಲಿ ಒಟ್ಟು 2,03,279 ಮತದಾರರಿದ್ದು, 1,57,863 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಮುಕ್ಕಾಲು ಪಾಲು (ಶೇ 77) ಮತ ಬಿಜೆಪಿ ಬುಟ್ಟಿಗೆ ಬಿದ್ದಿವೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರ ಪರಿಶ್ರಮ ಮತಗಳಾಗಿ ಪರಿವರ್ತನೆಯಾಗಿವೆ ಎನ್ನಬಹುದು.

ಬಿಜೆಪಿಗೆ ಹೆಚ್ಚು ಮತ ತಂದುಕೊಟ್ಟ 2ನೇ ವಿಧಾನಸಭಾ ಕ್ಷೇತ್ರ ಉಡುಪಿ. ಪ್ರಮೋದ್ ಮಧ್ವರಾಜ್ ಅವರ ವರ್ಚಸ್ಸನ್ನೂ ಮೀರಿ ಶೋಭಾ 1,01,507 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿಯಲ್ಲಿ ಒಟ್ಟು 2,09,504 ಮತದಾರರಿದ್ದು 1,65,033 ಮಂದಿ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಶೇ 61.50ರಷ್ಟು ಮತ ಕಮಲದ ತೆಕ್ಕೆಗೆ ಬಿದ್ದಿವೆ. ಬಿಜೆಪಿ ಶಾಸಕ ರಘುಪತಿ ಭಟ್‌ ಹಾಗೂ ಸ್ಥಳೀಯ ಮುಖಂಡರ ಪಾತ್ರ ಇದರ ಹಿಂದಿದೆ.

ಅದೇರೀತಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಕೈಕೊಟ್ಟ ವಿಧಾನಸಭಾ ಕ್ಷೇತ್ರ ಕುಂದಾಪುರ. ಇಲ್ಲಿ ಕೇವಲ 35,779 (ಶೇ 22) ಮತಗಳು ಮಾತ್ರ ಅವರಿಗೆ ಸಿಕ್ಕಿವೆ. ಅತಿ ಕಡಿಮೆ ಮತಗಳು ಬಿದ್ದ 2ನೇ ಕ್ಷೇತ್ರ ಕಾರ್ಕಳ. ಇಲ್ಲಿ 38,895 (ಶೇ 27) ಮತಗಳು ಮಾತ್ರ ಲಭಿಸಿವೆ.

ಆದರೆ, ಪ್ರಮೋದ್ ಅವರಿಗೆ ತವರು ಕ್ಷೇತ್ರ ಉಡುಪಿಯಲ್ಲಿ ಹೆಚ್ಚು ಮತಗಳು ಬಿದ್ದಿವೆ. ಇಲ್ಲಿ 57,246 (ಶೇ 34) ಮತ ಸಿಕ್ಕಿವೆ. ಅದೇರೀತಿ ಬಿಜೆಪಿಯ ಗಟ್ಟಿ ನೆಲ, ಶಾಸಕಸಿ.ಟಿ.ರವಿ ಅವರ ಕ್ಷೇತ್ರ ಚಿಕ್ಕಮಗಳೂರಿನಲ್ಲೂ 54,490 ವೋಟ್‌ಗಳು ಸಿಕ್ಕಿವೆ.

ಚಿಕ್ಕಮಗಳೂರಿನಲ್ಲಿ ಹೆಚ್ಚು:

ಉಡುಪಿ ಜಿಲ್ಲೆಗೆ ಹೋಲಿಸಿದರೆಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಮೋದ್‌ಗೆ ಹೆಚ್ಚು ಮತಗಳು ಬಿದ್ದಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1,90,582 ಮತಗಳು ಸಿಕ್ಕರೆ ಉಡುಪಿ ಜಿಲ್ಲೆಯಲ್ಲಿ1,78,350 ಮತಗಳು ಲಭ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.