ADVERTISEMENT

23ರಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭ; ಸಂಜೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ

ಉಡುಪಿ–ಚಿಕ್ಕಮಗಳೂರು ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 14:16 IST
Last Updated 18 ಮೇ 2019, 14:16 IST
ಹೆಪ್ಸಿಬಾ ರಾಣಿ ಕೊರ್ಲಪಾಟಿ
ಹೆಪ್ಸಿಬಾ ರಾಣಿ ಕೊರ್ಲಪಾಟಿ   

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮೇ 23ರಂದು ನಗರದ ಸೇಂಟ್‌ ಸಿಸಿಲಿಸ್ ಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂಗಳ ಬಾಗಿಲು ತೆರೆಯಲಾಗುವುದು. 8ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಮೊದಲಿಗೆ 5 ಮೇಜುಗಳಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ ಒಂದು ಕೊಠಡಿಗಳಲ್ಲಿ ನಡೆಯಲಿದ್ದು, ಉಳಿದ 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ತಲಾ 2 ಕೊಠಡಿಗಳಿಗೆ ನಡೆಯಲಿದೆ. ಪ್ರತಿ ಕೇಂದ್ರಕ್ಕೆ 2 ರಿಂದ 3 ಸಿಸಿಟಿವಿ ಕ್ಯಾಮೆರಾಗಳನ್ನು ಅವಳವಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಎಆರ್‌ಒ, 127 ಮೇಲ್ವಿಚಾರಕರು, 131 ಮತ ಎಣಿಕೆ ಸಿಬ್ಬಂದಿ, 127 ಮೈಕ್ರೋ ಅಬ್ಸರ್ವರ್ಸ್‌, 21 ಮಂದಿ ಟ್ಯಾಬ್ಯುಲೇಷನ್‌ಗೆ ಹಾಗೂ 127 ಡಿ ದರ್ಜೆ ಸಿಬ್ಬಂದಿ ನಿಯೋಜಿಸಲಾಗಿದೆ. ಶೇ 10ರಷ್ಟು ಮೀಸಲು ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಿಬ್ಬಂದಿಗೆ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಮೇ 19ರಂದು 2ನೇ ಹಂತದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

130 ಸಿಸಿಟಿವಿ ಕ್ಯಾಮೆರಾ:

ಸ್ಟ್ರಾಂಗ್ ರೂಂ ಸುತ್ತಮುತ್ತ ಈಗಾಗಲೇ 105 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದ್ದು, ಅವುಗಳ ಜತೆಗೆ ಎಣಿಕೆ ದಿನ ಹೆಚ್ಚುವರಿಯಾಗಿ 130 ಸಿಸಿಟಿವಿ ಕ್ಯಾಮೆರಾ ಹಾಕಲಾಗುವುದು.

ಗುರುತಿನ ಚೀಟಿ ಇದ್ದರೆ ಪ್ರವೇಶ:

ಚುನಾವಣಾಧಿಕಾರಿ ನೀಡಿರುವ ಅಧಿಕೃತ ಗುರುತಿನ ಪತ್ರ ಇದ್ದವರಿಗೆ ಮಾತ್ರ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರುತ್ತದೆ. ಮೊಬೈಲ್, ಬೀಡಿ, ಸಿಗರೇಟ್‌, ಬೆಂಕಿಪೊಟ್ಟಣ, ಕತ್ತರಿ, ಬ್ಲೇಡ್‌, ಸಿಗರ್‌ಲೈಟ್‌ಗಳನ್ನು ಕೇಂದ್ರಕ್ಕೆ ಕೊಂಡೊಯ್ಯುವಂತಿಲ್ಲ. ಎಣಿಕೆ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ರಹಿತ ಪಾದಚಾರಿ ವಲಯವನ್ನಾಗಿ ಗುರುತಿಸಲಾಗಿದೆ.

ಮೊಬೈಲ್ ನಿಷೇಧ: ಎಣಿಕೆ ಕೇಂದ್ರಕ್ಕೆ ಮೊಬೈಲ್ ಕೊಂಡೊಯ್ಯುವಂತಿಲ್ಲ. ಕೊಂಡೊಯ್ದರೆ ಮೀಸಲಾದ ಜಾಗದಲ್ಲಿ ಮೊಬೈಲ್ ಇಡಬೇಕು. ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಗ್ರೀನ್ ರೂಂ, ಪ್ರಥಮ ಚಿಕಿತ್ಸಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ.

21ರಂದು ಡ್ರೈ ರನ್‌:

ಆಯೋಗದ ಸೂಚನೆಯಂತೆ ಮತ ಎಣಿಕೆಯ ಪೂರ್ವಭಾವಿಯಾಗಿ ಮೇ 21ರಂದು ಸುವಿಧಾ ಡ್ರೈ ರನ್ ಮಾಡಲಾಗುವುದು. ಇದರಿಂದ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಡಿಸಿ ಮಾಹಿತಿ ನೀಡಿದರು.

ಫಲಿತಾಂಶ ಘೋಷಣೆಗೆ ವ್ಯವಸ್ಥೆ:

ಪ್ರತಿ ಸುತ್ತಿನ ಎಣಿಕೆ ಮುಗಿದ ಕೂಡಲೇ ವಿಧಾನಸಭಾ ಕ್ಷೇತ್ರವಾರು ಮತಗಳಿಕೆ ವಿವರವನ್ನು ನೀಡಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಮತ ಎಣಿಕೆ ಕೇಂದ್ರದ ಹೊರಗೆ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಾಗುವುದು. ಎಣಿಕೆ ಕಾರ್ಯದ ವೀಕ್ಷಕರನ್ನಾಗಿ ಆಯೋಗ ಕೃಷ್ಣಕುನಾಲ್ ಹಾಗೂ ನಿತೇಶ್ವರ ಕುಮಾರ್ ಅವರನ್ನು ನಿಯೋಜಿಸಿದೆ ಎಂದು ಡಿಸಿ ತಿಳಿಸಿದರು.

ಹಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಎಸ್‌ಪಿ ನಿಶಾ ಜೇಮ್ಸ್‌ ಉಪಸ್ಥಿತರಿದ್ದರು.

‘ಅಣಕು ಮತದಾನದ ವಿವರ ಅಳಿಸಿಲ್ಲ’

ಚಿಕ್ಕಮಗಳೂರು ಜಿಲ್ಲೆಯ ಒಂದು ಮತಗಟ್ಟೆಯಲ್ಲಿ ಚುನಾವಣೆಗೂ ಮುನ್ನ ನಡೆದ ಅಣುಕು ಮತದಾನದ ವಿವರಗಳನ್ನು ಮತ ಯಂತ್ರದಿಂದ ಅಳಿಸಿ ಹಾಕಿಲ್ಲ. ಪರಿಶೀಲನೆ ವೇಳೆ ಈ ವಿಚಾರ ಗಮನಕ್ಕೆ ಬಂದಿದ್ದು, ಚುನಾವನಾ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗದ ಸೂಚನೆಯಂತೆ ಒಂದು ಮತಗಟ್ಟೆಯ ವಿವಿ ಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು. ಅಣಕು ಮತದಾನದ ಬಳಿಕ ವಿವಿ ಪ್ಯಾಟ್‌ನಲ್ಲಿರುವ ಸ್ಲಿಪ್‌ಗಳನ್ನು ಪ್ರತ್ಯೇಕವಾಗಿ ಇಟ್ಟಿರುವುದರಿಂದ ಸಮಸ್ಯೆಗಳು ಆಗುವುದಿಲ್ಲ. ನಿಖರವಾದ ಅಂಕಿ ಅಂಶಗಳು ಸಿಗಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.