ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ: ಸಾರ್ವಜನಿಕರಿಗೆ ಕಿರಿಕಿರಿ

ನಿರಂತರ ವಿದ್ಯುತ್ ವ್ಯತ್ಯಯ; ವರ್ಕ್ ಫ್ರಂ ಹೋಂಗೂ ಸಮಸ್ಯೆ

ಬಾಲಚಂದ್ರ ಎಚ್.
Published 16 ಜೂನ್ 2021, 16:27 IST
Last Updated 16 ಜೂನ್ 2021, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದ ಮಣಿಪಾಲ ಸೇರಿದಂತೆ ಹಲವು ಭಾಗಗಳಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಪರಿಣಾಮ ಸಾರ್ವಜನಿಕರು ಕತ್ತಲಿನಲ್ಲಿ ಕಾಲ ಕಳೆಯಬೇಕಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ನಾಗರಿಕರು ಬೇಸತ್ತಿದ್ದಾರೆ.

ಆನ್‌ಲೈನ್‌ ಕ್ಲಾಸ್‌ಗೂ ಸಮಸ್ಯೆ:‌

ಜೂನ್ 15ರಿಂದ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ಆದರೆ, ನಿರಂತರ ವಿದ್ಯುತ್ ಕಡಿತದಿಂದ ಮಕ್ಕಳು ಆನ್‌ಲೈನ್‌ ಪಾಠ ಕೇಳಲು ಅಡ್ಡಿಯಾಗಿದೆ. ಮೊಬೈಲ್ ಚಾರ್ಜ್‌ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೋಂ ವರ್ಕ್‌ ಮಾಡಿಸಲು ಸಮಸ್ಯೆಯಾಗಿದೆ ಎಂದು ಹಲವು ಪೋಷಕರು ದೂರಿದ್ದಾರೆ.

ADVERTISEMENT

ವರ್ಕ್ ಫ್ರಮ್ ಹೋಂಗೂ ಅಡ್ಡಿ:

ಲಾಕ್‌ಡೌನ್ ಕಾರಣದಿಂದ ಬಹುತೇಕ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮತಿ ನೀಡಿವೆ. ಆದರೆ ಕರೆಂಟ್‌ ಕೈಕೊಡುತ್ತಿರುವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಯಾವಾಗ ಕರೆಂಟ್ ಬರುತ್ತದೆ ಎಂದು ಕಾಯುವಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಖಾಸಗಿ ಕಂಪನಿಯ ಉದ್ಯೋಗಿ ರಾಜೇಶ್‌.‌

ಮಣಿಪಾಲ ವ್ಯಾಪ್ತಿಯ ಇಂದ್ರಾಳಿ, ಶ್ರೀನಿವಾಸ ನಗರ, ಲಕ್ಷ್ಮೀಂದ್ರ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಶ್ರೀನಿವಾಸ ನಗರದ ಹಲವು ರಸ್ತೆಗಳಲ್ಲಿ ಮಂಗಳವಾರ ಬೆಳಿಗ್ಗೆ 19ಕ್ಕೆ ಹೋಗಿದ್ದ ಕಂರೆಂಟ್‌ ಬುಧವಾರ ಸಂಜೆಯ ಹೊತ್ತಿಗೆ ಬಂತು. ಪರಿಣಾಮ ಕತ್ತಲಿನಲ್ಲಿ ದಿನ ದೂಡಬೇಕಾಯಿತು ಎಂದು ಸಮಸ್ಯೆ ಹೇಳಿಕೊಂಡರು ಅಲ್ಲಿನ ನಿವಾಸಿಗಳು.

ನಗರದಲ್ಲಿ ಮಳೆಗಾಳಿಯ ಅಬ್ಬರ ಕಡಿಮೆಯಾಗಿದ್ದರೂ ವಿದ್ಯುತ್ ವ್ಯತ್ಯಯ ನಿಂತಿಲ್ಲ. ಸಣ್ಣ ಮಳೆಗೂ ಕರೆಂಟ್ ತೆಗೆಯಲಾಗುತ್ತಿದೆ. ಒಂದೇ ರಸ್ತೆಯಲ್ಲಿ ಕೆಲವು ಮನೆಗಳಲ್ಲಿ ವಿದ್ಯುತ್ ಇದ್ದರೆ, ಹಲವು ಮನೆಗಳಲ್ಲಿ ಇರುವುದಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಕೂಡಲೇ ಮೆಸ್ಕಾಂ ಸಮಸ್ಯೆ ಬಗೆಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ತಿಂಗಳಿಗೂ ಹೆಚ್ಚುಕಾಲ ಮನೆಯಲ್ಲಿ ಬಂಧಿಯಾಗಿದ್ದೇವೆ. ಟಿ.ವಿ ವೀಕ್ಷಣೆಯ ಮೂಲಕವಾದರೂ ದಿನದೂಡೋಣ ಎಂದರೂ ಸಾಧ್ಯವಾಗುತ್ತಿಲ್ಲ. ಸ್ಥಿತಿವಂತರು ಮನೆಯಲ್ಲಿ ಯುಪಿಎಸ್‌ ಬಳಸುತ್ತಾರೆ. ಆದರೆ, ಸಾಮಾನ್ಯರು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾರೆ ಮಣಿಪಾಲದ ದಿನೇಶ್‌.‌

‘ಮಳೆ ಗಾಳಿಯಿಂದ ಸಮಸ್ಯೆ’

ಮೂರ್ನಾಲ್ಕು ದಿನಗಳಿಂದ ಗಾಳಿ ಮಳೆಯ ಅಬ್ಬರ ಹೆಚ್ಚಾಗಿರುವ ಕಾರಣ ನೂರಾರು ವಿದ್ಯುತ್ ಕಂಬಗಳು ಬಿದ್ದಿದ್ದು, ವ್ಯತ್ಯಯವಾಗುತ್ತಿದೆ. ಉಡುಪಿಯಲ್ಲಿ ರಸ್ತೆಯ ಬದಿಯಲ್ಲಿ ಮರಗಳು ಹೆಚ್ಚಾಗಿರುವ ಕಾರಣ, ಮಳೆ ಗಾಳಿಗೆ ಮರಗಳ ಗೆಲ್ಲುಗಳು ವಿದ್ಯುತ್ ಲೈನ್‌ಗಳ ಮೇಲೆ ಬಿದ್ದು ಟ್ರಿಪ್‌ ಆಗುತ್ತಿದೆ. ಮೆಸ್ಕಾಂ ಸಿಬ್ಬಂದಿ ಮಳೆ ಗಾಳಿಯ ಮಧ್ಯೆಯೂ ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನ ರಸ್ತೆ ಬದಿಯ ಮರಗಳ ಗೆಲ್ಲುಗಳನ್ನು ಕತ್ತರಿಸಿದರೂ ಗಾಳಿ ಮಳೆಯಿಂದ ಮರಗಳೇ ಬೀಳುತ್ತಿರುವುದರಿಂದ ಸಮಸ್ಯೆಯಾಗಿದೆ.

–ನರಸಿಂಹ ಪಂಡಿತ್‌, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.