ಬ್ರಹ್ಮಾವರ: ‘ಕೃಷಿಕರಿಗೆ ಶಕ್ತಿ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ರೈತ ಮುಖಂಡರು, ಜಿಲ್ಲಾಡಳಿತದೊಂದಿಗೆ ರೈತರ ಸಂವಾದ ನಡೆಸಿ ಅವರ ಬೇಕು– ಬೇಡಗಳನ್ನು ತಿಳಿದುಕೊಂಡು ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನಕ್ಕೆ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಇಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ ಇಲಾಖೆ, ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೀಜಿಸಿರುವ ಎರಡು ದಿನದ ಕೃಷಿಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭತ್ತಕ್ಕೆ ಬೆಂಬಲ ಬೆಲೆ ಹೆಚ್ಚಿಸುವ ಪ್ರಯತ್ನ ನಡೆಸಲಾಗಿದ್ದು, ಕಾಳು ಮೆಣಸಿಗೂ ಬೆಂಬಲ ಬೆಲೆ ನೀಡುವ ಪ್ರಯತ್ನ ಮಾಡಲಾಗುವುದು. ಬ್ರಹ್ಮಾವರದಲ್ಲಿ ನೆನೆಗುದಿಗೆ ಬಿದ್ದಿರುವ ಕೃಷಿ ಕಾಲೇಜು ಸ್ಥಾಪನೆಗೆ ಮರುಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಯುವಜನರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ತರಬೇತಿಯೊಂದಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಮೀನುಗಾರಿಕೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವತ್ತ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿಯಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಯುವಕರು ಕೃಷಿಯಿಂದ ವಿಮುಖರಾಗುತ್ತಿರುವುದು ಬೇಸರದ ಸಂಗತಿ. ಕೃಷಿಯಿಂದಲೂ ಉತ್ತಮ ಲಾಭ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ನೀಡುವ ಅಗತ್ಯತೆ ಇದೆ. ರೈತರು ಕೃಷಿ ವಿಜ್ಞಾನಿಗಳ ಸಲಹೆ, ಮಾರ್ಗದರ್ಶನ ಪಡೆದು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡಲ್ಲಿ ಲಾಭ ಪಡೆದು ಯುವ ಜನರಿಗೆ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.
ಸನ್ಮಾನ, ಕೈಪಿಡಿ ಬಿಡುಗಡೆ: ಕೃಷಿ ಸಾಧಕರಾದ ಉದಯ ಕುಮಾರ್ ವಂಡ್ಸೆ, ಜಯಲಕ್ಷ್ಮೀ ಪೆರ್ಡೂರು, ಸದಾಶಿವ ಐತಾಳ, ಚಂದ್ರಶೇಖರ ಶೆಟ್ಟಿ ಸುರತ್ಕಲ್, ಚಂದ್ರಶೇಖರ ನಾಯ್ಕ, ವಿಧಾತ್ರಿ ರೈತ ಉತ್ಪಾದಕರ ಕಂಪನಿಯನ್ನು ಸನ್ಮಾನಿಸಲಾಯಿತು. ಶಾಸಕ ಗುರ್ಮೆ ಸುರೇಶ ಶೆಟ್ಟಿ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್ ಕೊಡ್ಗಿ, ದ.ಕ. ಜಿಲ್ಲಾ ಘಟಕದ ವಿಜಯ ಕುಮಾರ್ ರೈ, ಕೆನರಾ ಬ್ಯಾಂಕ್‌ನ ಅಮಿತಾಭ ಶಂಕರ್, ಬ್ಯಾಂಕ್ ಆಫ್ ಬರೋಡಾದ ಸಖಾರಾಮ ಭಂಡಾರ್‌ಕಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ ಆರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಎಂ.ಎಸ್, ಪಶು ಸಂಗೋಪನೆ ಇಲಾಖೆಯ ಡಾ.ಎಂ.ಸಿ. ರೆಡ್ಡಪ್ಪ, ಅರಣ್ಯ ಇಲಾಖೆಯ ರವೀಂದ್ರ ಕುಮಾರ್, ಕೃಷಿ ಇಲಾಖೆಯ ಚಂದ್ರಶೇಖರ ನಾಯ್ಕ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ, ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ನಿರ್ದೇಶಕ ಜಿ.ಕೆ. ಗಿರಿಜೇಶ, ಸಂಶೋಧನಾ ನಿರ್ದೇಶಕ ಬಿ.ಎಂ. ದುಷ್ಯಂತ ಕುಮಾರ್, ಕೃಷಿ ಡಿಪ್ಲೊಮಾ ಕಾಲೇಜು ಪ್ರಾಂಶುಪಾಲ ಸುಧೀರ ಕಾಮತ್ ಭಾಗವಹಿಸಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಧನಂಜಯ ಬಿ. ಸ್ವಾಗತಿಸಿದರು. ಹಿರಿಯ ಕ್ಷೇತ್ರ ನಿರ್ದೇಶಕ ಶಂಕರ ಎಂ. ವಂದಿಸಿದರು. ಸಂತೋಷ ಶೆಟ್ಟಿ ನೀಲಾವರ, ಪ್ರವೀಣ ಎಸ್. ನಿರೂಪಿಸಿದರು.
ಇಂದಿನ ಕಾರ್ಯಕ್ರಮಗಳು
ವಿಚಾರಗೋಷ್ಠಿ: ಬೆಳಿಗ್ಗೆ 10.30ಕ್ಕೆ ಕೃಷಿ ವಿಜ್ಞಾನ ಕೇಂದ್ರದ ಚೈತನ್ಯ ಎಚ್.ಎಸ್. ಅವರಿಂದ ‘ಗೇರು ಮತ್ತು ಕೊಕ್ಕೊ ಕೃಷಿ’ ಬಂಟ್ವಾಳ ಪೆರುವಾಯಿಯ ಕೃಷಿಕ ಅನಂತರಾಮಕೃಷ್ಣ ಅವರಿಂದ ‘ಅಡಿಕೆಯಲ್ಲಿ ಸ್ವಯಂಚಾಲಿತ ನೀರಾವರಿ ಮತು ಧೂಪದ ಮರದಲ್ಲಿ ಕಾಳುಮೆಣಸು ಕೃಷಿ’ ಉಡುಪಿಯ ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕ ಅವಿನಾಶ ಅವರಿಂದ ‘ಕೃಷಿ ವಿಸ್ತರಣೆಯಲ್ಲಿ ಕೃಷಿ ಸಖಿಯರ ಪಾತ್ರ’ದ ಬಗ್ಗೆ ವಿಚಾಗೋಷ್ಠಿ ಪುತ್ತೂರು ಚಿಕ್ಕಮಡ್ನೂರಿನ ಕೃಷಿಕ ಅಜಿತ್ ಪ್ರಸಾದ್ ರೈ ಅವರಿಂದ ಕಾಳುಮೆಣಸು ಕೃಷಿ ಅನುಭವ ಹಂಚಿಕೆ ನಡೆಯಲಿದೆ. ಕಾರ್ಕಳ ಶಿರ್ಲಾಲಿನ ಗುಣಪಾಲ ಕಡಂಬ ದ.ಕ. ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ. ಮಂಜುನಾಥ ಕುದಿ ಶ್ರೀನಿವಾಸ ಭಟ್ ಭಾಗವಹಿಸುವರು. ಮಧ್ಯಾಹ್ನ 2ಕ್ಕೆ ಕಾರ್ಕಳ ಸಾಣೂರಿನ /// ‘ಸುಸ್ಥಿರ ಭತ್ತ ಕೃಷಿಯಲ್ಲಿ ಸ್ಥಳೀಯ ತಳಿಗಳ ಮಹತ್ವ’ ಕೆ.ವಿ.ಕೆ.ಯ ಶ್ರೀದೇವಿ ಜಕ್ಕೇರಾಳ ‘ಸುಸ್ಥಿರ ಭತ್ತ ಕೃಷಿಯಲ್ಲಿ ಅಭಿವೃದ್ಧಿಪಡಿಸಿದ ತಳಿಗಳ ಮಹತ್ವ’ ಮಣಿಪಾಲದ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ ಶೆಟ್ಟಿ ‘ಜಾನುವಾರು ಮತ್ತು ಕೋಳಿ ಸಾಕಾಣಿಕೆ’ ಮಂಗಳೂರು ಕಿನ್ನಿಗೋಳಿಯ ಪ್ರಜ್ವಲ್ ಎಂ. ‘ಜೇನು ಸಾಕಾಣಿಕೆ ಮತ್ತು ಮೌಲ್ಯವರ್ಧನೆ’ ಬಗ್ಗೆ ಮಾಹಿತಿ ನೀಡುವರು. ಭಾರತೀಯ ಕಿಸಾನ್ ಸಂಘದ ನವೀನಚಂದ್ರ ಜೈನ್ ಬೈಂದೂರಿನ ತಿಮ್ಮಣ್ಣ ಹೆಗ್ಡೆ ಭಾಗವಹಿಸುವರು. ಸಂಜೆ 5ಕ್ಕೆ ರೈತ ವಿಜ್ಞಾನಿಗಳ ಮುಕ್ತ ಚರ್ಚೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.