ADVERTISEMENT

ಕೋಟ | ಕೃಷಿ ನಾಶ: ರೈತರಿಂದ ಉಪವಾಸ ಸತ್ಯಾಗ್ರಹ

ಸಾವಿರಾರು ರೈತರು ಭಾಗಿ: ನೆರೆ ಸೃಷ್ಟಿ– ಹೊಳೆ ಹೂಳೆತ್ತುವಂತೆ ಆಗ್ರಹ, ಸತ್ಯಾಗ್ರಹ ಕೈಬಿಡಲು ಜಿಲ್ಲಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 4:52 IST
Last Updated 8 ಆಗಸ್ಟ್ 2024, 4:52 IST
ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಶ್ಚಂದ್ರ ಶೆಟ್ಟಿ ಪ್ರತಿಭಟನೆಯಲ್ಲಿ ಮಾತನಾಡಿದರು
ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಶ್ಚಂದ್ರ ಶೆಟ್ಟಿ ಪ್ರತಿಭಟನೆಯಲ್ಲಿ ಮಾತನಾಡಿದರು   

ಕೋಟ (ಬ್ರಹ್ಮಾವರ): ಮುಗ್ದ ರೈತರು ಪ್ರತಿಭಟಿಸುವ ಗೋಜಿಗೆ ಹೋಗುವುದಿಲ್ಲ. ಅಸಹಾಯಕ ವ್ಯವಸ್ಥೆ ಯಾವುದೇ ಇದ್ದರೂ ಸರ್ಕಾರ ರೈತರ ಪರವಾಗಿ ಇರುತ್ತದೆ ಎನ್ನುವ ನಂಬಿಕೆ ಅವರದ್ದು. ನೋವಿಗೆ ಸ್ಪಂದನೆ ಸಿಗದಿದ್ದಾಗ ಪ್ರತಿಭಟನೆಯೇ ದಾರಿ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಶ್ಚಂದ್ರ ಶೆಟ್ಟಿ ಹೇಳಿದರು.

ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನ ಬಳಿ ಬುಧವಾರ ತೆಕ್ಕಟ್ಟೆ, ಕೋಟದ ಗಿಳಿಯಾರು, ಚಿತ್ರಪಾಡಿ ಕಾರ್ಕಡದವರೆಗೆ ಹೊಳೆಯ ಹೂಳಿನ ಸಮಸ್ಯೆಯಿಂದ ನೆರೆ ಸೃಷ್ಟಿಯಾಗಿ, ರೈತರು ಬೆಳೆದ ಕೃಷಿ ಕೊಳೆಯುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ, ಹೊಳೆಯ ಹೂಳೆತ್ತಲು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ನಡೆದ ಧರಣಿ, ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಸರ್ಕಾರ ಸೌಲಭ್ಯಗಳನ್ನು ನೀಡುತ್ತದೆ, ರೈತರ ಭಾವನೆಗಳನ್ನು ಮುಟ್ಟಿಸಲು ಜನಪ್ರತಿನಿಧಿಗಳಿದ್ದಾರೆ. ತಪ್ಪು ನಾವು ಅಥವಾ ಸರ್ಕಾರ ಮಾಡುತ್ತದೆ ಎಂಬ ಗೊಂದಲದಲ್ಲಿ ನಾವಿದ್ದೇವೆ. ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಬೇಕು. ನಾವು ನಿಮ್ಮ ಜತೆ ಇದ್ದೇವೆ ಎಂದು ಅವರು ರೈತರಿಗೆ ಧೈರ್ಯ ತುಂಬಿದರು.

ADVERTISEMENT

ವಾರಾಹಿ ಯೋಜನೆ ಸಮರ್ಪಕ ಅನುಷ್ಠಾನ ಆಗಿಲ್ಲ. ಆಗಿದ್ದರೆ ಅದರಿಂದ ಬಹಳ ಅನುಕೂಲವಾಗುತ್ತಿತ್ತು. ರೈತರು ಧ್ವನಿ ಎತ್ತಬೇಕು. ಗುತ್ತಿಗೆದಾರರ ಲಾಭಕ್ಕಾಗಿ ಯೋಜನೆ ಅನುಷ್ಠಾನ ಒಳ್ಳೆಯದಲ್ಲ. ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನ ಹರಿಸಬೇಕು ಎಂದರು.

ಕೃಷಿಕ ಶಾನಾಡಿ ಶ್ರೀನಿವಾಸ ಭಟ್ ಉದ್ಘಾಟಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸತ್ಯಾಗ್ರಹ ನಿರತರ ಅಹವಾಲು ಸ್ವೀಕರಿಸಿದರು. ಬೇಡಿಕೆಗಳನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಲಾಗುವುದು. ಜಿಲ್ಲಾಡಳಿತದಿಂದ ಆಗುವ ಕಾಮಗಾರಿ ನಿರ್ವಹಿಸುತ್ತೇವೆ. ಹೂಳು ತೆಗೆಯುಲು ಕ್ರಮ, ಡ್ಯಾಂ ನಿರ್ಮಾಣ, ಬೆಳೆಹಾನಿ ಪ್ಯಾಕೇಜ್ ಬಗ್ಗೆ ಶೀಘ್ರ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗುವುದು. ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಉಪವಾಸ ಕೈಬಿಡುವಂತೆ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು.

ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಭೇಟಿ ನೀಡಿದರು. ಪ್ರತಿಭಟನೆಯಲ್ಲಿ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಆನಂದ ಸಿ.ಕುಂದರ್, ರೈತ ಮುಖಂಡರಾದ ಜಿ. ತಿಮ್ಮ ಪೂಜಾರಿ, ಕೇದೂರು ಸದಾನಂದ ಶೆಟ್ಟಿ, ಗೋಪಾಲ ಪೈ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಕೋಟ ಸಹಕಾರಿ ನಿರ್ದೇಶಕರಾದ ರವೀಂದ್ರ ಕಾಮತ್, ರಂಜಿತ್‌ ಕುಮಾರ್, ಕೋಟ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಹೋರಾಟ ಸಮಿತಿ ಪ್ರಮುಖರಾದ ನಾಗರಾಜ ಗಾಣಿಗ, ತಿಮ್ಮ ಕಾಂಚನ್, ಮಹೇಶ ಶೆಟ್ಟಿ, ರಮೇಶ ಮೆಂಡನ್ ಸಾಲಿಗ್ರಾಮ, ಅಚ್ಯುತ ಪೂಜಾರಿ ಇದ್ದರು. ಸಮಿತಿಯ ಪ್ರಮುಖ ಟಿ. ಮಂಜುನಾಥ ಗಿಳಿಯಾರು ಪ್ರಾಸ್ತಾವಿಕ ಮಾತನಾಡಿದರು. ಕೀರ್ತೀಶ್‌ ಪೂಜಾರಿ ನಿರೂಪಿಸಿದರು.

ರೈತರ ಹಕ್ಕೊತ್ತಾಯಗಳು

ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ನಾಗರಮಠ ಚೆಕ್ ಡ್ಯಾಂವರೆಗೆ ಹೊಳೆಯ ನದಿಪಾತ್ರ ಗುರುತಿಸಿ ಹೂಳು ತೆಗೆಯಬೇಕು. ಕೋಟ ಸಾಹೇಬರಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಈಗ ಇರುವ ಅತಿ ಕಡಿಮೆ ವ್ಯಾಸದ ತೂಗು ಸೇತುವೆಗಳನ್ನು ತೆಗೆದು ಪಿಲ್ಲರ್ ಸೇತುವೆಗಳನ್ನು ನಿರ್ಮಿಸಬೇಕು. ಕಾರ್ಕಡ ಗ್ರಾಮದ ಕುದುರು ಮನೆ ಡ್ಯಾಂ ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಂಗಳಿಗೆ ಅಳವಡಿಸಿರುವ ಹಲಗೆಗಳನ್ನು ಸಂಪೂರ್ಣವಾಗಿ ತೆರವು ಮಾಡಬೇಕು. ಈ ಭಾಗದಲ್ಲಿ ಉಂಟಾಗುತ್ತಿರುವ ನೆರೆ ಪರಿಹಾರಕ್ಕೆ ಪರಿಣತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು. ನೆರೆಯಿಂದ ಕೃಷಿ ನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರೈತರು ಹಕ್ಕೊತ್ತಾಯ ಸಲ್ಲಿಸಿದರು.

ಕೋಟದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬುಧವಾರ ಕೃಷಿ ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತು ಹೊಳೆಯ ಹೂಳೆತ್ತಬೇಕು ಎಂದು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಯಿತು.
ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮನವಿ ಸ್ವೀಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.