ADVERTISEMENT

ಉಡುಪಿ: ಮೀನಿನ ತ್ಯಾಜ್ಯವೇ ಇಲ್ಲಿ ಸಂಪನ್ಮೂಲ

ಫಿಶ್‌ಮಿಲ್‌ಗಳಲ್ಲಿ ತಯಾರಾಗುವ ಮೀನಿನ ಎಣ್ಣೆ, ಪೌಡರ್‌, ಪೇಸ್ಟ್‌: ವಿದೇಶಗಳಿಗೂ ರಫ್ತು

ಬಾಲಚಂದ್ರ ಎಚ್.
Published 19 ಅಕ್ಟೋಬರ್ 2019, 19:45 IST
Last Updated 19 ಅಕ್ಟೋಬರ್ 2019, 19:45 IST
ಮೀನಿನ ಎಣ್ಣೆ ಕ್ಯಾಪ್ಸುಲ್‌ (ಸಂಗ್ರಹ ಚಿತ್ರ)
ಮೀನಿನ ಎಣ್ಣೆ ಕ್ಯಾಪ್ಸುಲ್‌ (ಸಂಗ್ರಹ ಚಿತ್ರ)   

ಉಡುಪಿ: ಮತ್ಸ್ಯೋದ್ಯಮ ಕರಾವಳಿ ಆರ್ಥಿಕತೆಯ ಬೆನ್ನೆಲುಬು. ಕಡಲ ಮೀನುಗಾರಿಕೆ ಹಾಗೂ ಮೀನಿನ ಉಪ ಉತ್ಪನ್ನಗಳನ್ನು ತಯಾರಿಸುವ ಫಿಶ್‌ಮಿಲ್‌ಗಳು ನಾಣ್ಯದ ಎರಡು ಮುಖಗಳಿದ್ದಂತೆ.

ಫಿಶ್‌ಮಿಲ್‌ಗಳಿಗೆ ಹೋಗುವುದು ಏನು ?
ತಿನ್ನಲು ಯೋಗ್ಯವಾದ ಮೀನು ಮನುಷ್ಯನ ದೇಹ ಸೇರಿದರೆ, ಮೀನಿನ ತ್ಯಾಜ್ಯ ಫಿಶ್‌ಮಿಲ್‌ಗಳನ್ನು ಸೇರುತ್ತವೆ. ಕೊಳೆತ ಮೀನು, ರಫ್ತು ಮಾಡುವಾಗ ಉಳಿಯುವ ಮೀನಿನ ತಲೆ, ಬಾಲ ಫಿಶ್‌ಮಿಲ್‌ಗಳ ಪ್ರಮುಖ ಕಚ್ಛಾವಸ್ತು. ಈಚೆಗೆ ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವ ಕಾರ್ಗಿಲ್‌ ಮೀನು ತಿನ್ನಲು ಯೋಗ್ಯವಲ್ಲದ ಕಾರಣಕ್ಕೆ ಸಂಪೂರ್ಣವಾಗಿ ಫಿಶ್‌ಮಿಲ್‌ಗಳಿಗೆ ಹೋಗುತ್ತಿದೆ.

ವಿಶೇಷ ಅಂದರೆ, ಮೀನುಗಾರರಿಗೆ ಬೇಡವಾದ ತ್ಯಾಜ್ಯವೇ ಫಿಶ್‌ಮಿಲ್‌ಗಳಲ್ಲಿ ಸಂಸ್ಕರಣೆಯಾಗಿಆರೋಗ್ಯಕ್ಕೆ ಪೂರಕವಾದ ಉಪ ಉತ್ಪನ್ನಗಳಾಗಿ ಮರುಹುಟ್ಟು ಪಡೆಯುತ್ತವೆ. ಜತೆಗೆ, ಮತ್ತೆ ಮನುಷ್ಯನ ದೇಹ ಸೇರುತ್ತವೆ.

ADVERTISEMENT

ಉತ್ಪನ್ನಗಳು ಯಾವುವು ?
ಮೀನಿನ ತ್ಯಾಜ್ಯವನ್ನು ಬಳಸಿಕೊಂಡು ಫಿಶ್‌ಮಿಲ್‌ಗಳಲ್ಲಿ ಫಿಶ್‌ ಪೌಡರ್‌, ಮೀನಿನ ಎಣ್ಣೆ ಹಾಗೂ ಫಿಶ್‌ ಸಾಲುಬಲ್‌ ಪೇಸ್ಟ್‌ ಎಂಬ ಪ್ರಮುಖ ಮೂರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮೀನಿನ ತ್ಯಾಜ್ಯ ಬಳಕೆ ಮಾಡಿಕೊಂಡು ಗೊಬ್ಬರವನ್ನೂ ತಯಾರಿಸಲಾಗುತ್ತದೆ.

ಮೀನಿನ ಪೌಡರ್‌ ಬಳಸಿಕೊಂಡು ಮತ್ಸ್ಯೋದ್ಯಮ ಹಾಗೂ ಕುಕ್ಕುಟೋದ್ಯಮಕ್ಕೆ ಬೇಕಾದ ಉತ್ಪನ್ನ ತಯಾರು ಮಾಡಲಾಗುತ್ತದೆ. ಸೀಗಡಿ ಸಾಕಣೆ, ಕೋಳಿ ಸಾಕಾಣೆಗೆ ಮೀನಿನ ಪುಡಿಯಿಂದ ತಯಾರಾಗುವ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

ಮೀನಿನ ಎಣ್ಣೆಗೆ ಜಾಗತಿಕವಾಗಿ ಬೇಡಿಕೆಯಿದೆ. ಅನಾರೋಗ್ಯ ಸಮಸ್ಯೆಗಳಿಗೆ ಮೀನಿನ ಎಣ್ಣೆ ಪರಿಣಾಮಕಾರಿ ಔಷಧವೂ ಹೌದು. ವಿಟಮಿನ್‌ ಕ್ಯಾಪ್ಸೂಲ್‌ಗಳ ತಯಾರಿಕೆಗೆ ಮೀನಿನ ಎಣ್ಣೆ ಬಳಕೆಯಾಗುತ್ತದೆ.

ಎಲ್ಲ ಫಿಶ್‌ಮಿಲ್‌ಗಳು ಮೀನಿನ ಎಣ್ಣೆಯನ್ನು ಸಂಸ್ಕರಿಸುವುದಿಲ್ಲ. ಆಧುನಿಕ ತಂತ್ರಜ್ಞಾನ ಹೊಂದಿರುವ ದೊಡ್ಡಮಟ್ಟದ ಮಿಲ್‌ಗಳು ಮಾತ್ರ ಎಣ್ಣೆಯನ್ನು ಉತ್ಪಾದಿಸುತ್ತವೆ. ವಿದೇಶಗಳಿಗೂ ಮೀನಿನ ಎಣ್ಣೆ ರಫ್ತಾಗುತ್ತದೆ.‌

ಮೀನಿನ ಪೌಡರ್‌ ಹಾಗೂ ಎಣ್ಣೆ ತೆಗೆಯುವಾಗ ಮೀನಿನ ದೇಹದಿಂದ ಬಸಿಯುವ ನೀರನ್ನು ಬಳಸಿಕೊಂಡು ಫಿಶ್‌ ಸಾಲ್ಯುಬಲ್‌ ಪೇಸ್ಟ್‌ ತಯಾರಿಸಲಾಗುತ್ತದೆ. ಈ ಪೇಸ್ಟ್‌ಅನ್ನು ರಾಸಾಯನಿಕ ಉತ್ಪನ್ನಗಳ ಬಳಕೆಗೆ ಉಪಯೋಗಿಸಲಾಗುತ್ತದೆ. ಇದಕ್ಕೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ರಾಜ್ಯದ ಪಾಲು ಎಷ್ಟು ?
ದೇಶದಲ್ಲಿರುವ 56 ಫಿಶ್‌ಮಿಲ್‌ಗಳ ಪೈಕಿ 30ಕ್ಕಿಂತ ಹೆಚ್ಚು ಫಿಶ್‌ಮಿಲ್‌ಗಳು ರಾಜ್ಯದಲ್ಲಿವೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿಯೇ ಬಹುತೇಕ ಫಿಶ್‌ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಫಿಶ್‌ಮಿಲ್‌ಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಪೈಕಿ ಶೇ 50ಕ್ಕಿಂತ ಹೆಚ್ಚು ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.