ADVERTISEMENT

ಉಡುಪಿ | ಹವಾಮಾನ ವೈಪರೀತ್ಯದಿಂದ ಕಡಲು ಪ್ರಕ್ಷುಬ್ಧ: ನಾಡದೋಣಿ ಮೀನುಗಾರಿಕೆ ಸ್ತಬ್ಧ

ನವೀನ್ ಕುಮಾರ್ ಜಿ.
Published 21 ಜುಲೈ 2025, 2:38 IST
Last Updated 21 ಜುಲೈ 2025, 2:38 IST
<div class="paragraphs"><p>ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮಲ್ಪೆ ದಕ್ಕೆಗೆ ಮರಳುತ್ತಿರುವ ನಾಡದೋಣಿಗಳು</p></div>

ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮಲ್ಪೆ ದಕ್ಕೆಗೆ ಮರಳುತ್ತಿರುವ ನಾಡದೋಣಿಗಳು

   

ಉಡುಪಿ: ಮಳೆಗಾಲದಲ್ಲಿ ಭೋರ್ಗರೆವ ಕಡಲಿನ ಅಲೆಗಳೊಂದಿಗೆ ಸೆಣಸಿ ಮೀನುಗಾರಿಕೆ ನಡೆಸುವ ಮೀನುಗಾರರ ಬದುಕನ್ನು ದೋಣಿ ದುರಂತಗಳು ಕಸಿಯುತ್ತಿದ್ದು, ಮೀನುಗಾರರ ಸುರಕ್ಷತೆಗೆ ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂಬ ಬೇಡಿಕೆಗಳು ಕೇಳಿ ಬರುತ್ತಿವೆ.

ಜಿಲ್ಲೆಯ ಗಂಗೊಳ್ಳಿಯ ಅಳಿವೆ ಪ್ರದೇಶದಲ್ಲಿ ಈಚೆಗೆ ನಾಡದೋಣಿಯೊಂದು ಮಗುಚಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಅದಕ್ಕೂ ಕೆಲ ದಿನಗಳ ಹಿಂದೆ ಮಲ್ಪೆಯಲ್ಲಿ ದೋಣಿಯೊಂದು ಮಗುಚಿ ಮೀನುಗಾರರೊಬ್ಬರು ನೀರುಪಾಲಾಗಿದ್ದರು. ಇದಲ್ಲದೆ ಅಲೆಗಳ ಹೊಡೆತಕ್ಕೆ ಸಿಲುಕಿ ಮಲ್ಪೆ ವ್ಯಾಪ್ತಿಯಲ್ಲಿ ಹಲವಾರು ದೋಣಿಗಳು ಮುಗುಚಿದ್ದು, ಅದರಲ್ಲಿದ್ದ ಮೀನುಗಾರರನ್ನು ಇತರ ಮೀನುಗಾರರು ರಕ್ಷಿಸಿರುವ ಘಟನೆಗಳು ಕೂಡ ನಡೆದಿವೆ.

ADVERTISEMENT

ಪ್ರತಿ ಮಳೆಗಾಲದಲ್ಲೂ ನಾಡದೋಣಿ ಮೀನುಗಾರರ ಸುರಕ್ಷತೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದರೂ, ಅದಕ್ಕೆ ಸಮರ್ಪಕವಾದ ಪರಿಹಾರ ಮಾರ್ಗಗಳು ಒದಗಿ ಬಂದಿಲ್ಲ. ಭಾರತೀಯ ಹವಾಮಾನ ಇಲಾಖೆ ನೀಡುವ ಹವಾಮಾನ ಮುನ್ಸೂಚನೆಗಳು ನಾಡದೋಣಿ ಮೀನುಗಾರರೂ ಸೇರಿದಂತೆ ಎಲ್ಲ ಮೀನುಗಾರರಿಗೂ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತಿವೆ.

ಕೆಲವರು ಮುನ್ನೆಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಮೀನುಗಾರಿಕೆಗೆ ತೆರಳುತ್ತಿದ್ದಾರೆ, ಇದರಿಂದಲೂ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮೀನುಗಾರಿಕೆಗೆ ತೆರಳುವಾಗ ಲೈಫ್‌ ಜಾಕೆಟ್‌ನಂತಹ ಸುರಕ್ಷತಾ ಸಾಧನಗಳನ್ನು ಧರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎನ್ನುತ್ತವೆ ಮೀನುಗಾರಿಕೆ ಇಲಾಖೆ ಮೂಲಗಳು. ಕೆಲ ವರ್ಷಗಳಿಂದ ಲೈಫ್‌ ಜಾಕೆಟ್‌ ಸೇರಿದಂತೆ ವಿವಿಧ ಸುರಕ್ಷತಾ ಸಾಧನಗಳು ಸಿಕ್ಕಿಲ್ಲ ಎನ್ನುತ್ತಾರೆ ಕೆಲವು ಮೀನುಗಾರರು.

ಮಳೆಗಾಲದ ಎರಡು ತಿಂಗಳ ಅವಧಿಯಲ್ಲಿ ಟ್ರಾಲಿಂಗ್‌ ನಿಷೇಧ ಜಾರಿಗೆ ಬರುವುದರಿಂದ ದೊಡ್ಡ ದೋಣಿಗಳು ಕಡಲಿಗಿಳಿಯುವುದಿಲ್ಲ. ಈ ಅವಧಿಯಲ್ಲಿ ನಾಡದೋಣಿಗಳಷ್ಟೇ ಮೀನುಗಾರಿಕೆಗೆ ಇಳಿಯುತ್ತವೆ. ಆದರೆ, ಪದೇ ಪದೇ ಚಂಡಮಾರುತ ರೂಪುಗೊಂಡು ಕಡಲು ಪ್ರಕ್ಷುಬ್ಧವಾಗುವುದರಿಂದ ಅವರ ದುಡಿಮೆಗೆ ಹೊಡೆತ ಬೀಳುತ್ತಿದೆ.

ದೊಡ್ಡ ದೋಣಿಗಳು ದಡಸೇರಿದ ಅವಧಿಯಲ್ಲಷ್ಟೇ ನಾಡದೋಣಿ ಮೀನುಗಾರರು ಹಿಡಿಯುವ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಮೀನುಗಾರರು ಜೀವ ಪಣಕ್ಕಿಟ್ಟು ಮೀನುಗಾರಿಕೆಗೆ ಇಳಿಯುತ್ತಾರೆ. ಈ ಬಾರಿ ಆರಂಭದಲ್ಲಿ ನಾಡದೋಣಿ ಮೀನುಗಾರರಿಗೆ ಸಿಗಡಿ ಹೇರಳವಾಗಿ ಸಿಕ್ಕಿತ್ತು. ಆದರೆ ಅನಂತರ ಮಳೆ ತೀವ್ರಗೊಂಡು ಸಮುದ್ರ ಪ್ರಕ್ಷುಬ್ಧವಾದ ಕಾರಣ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ಇಳಿದಿಲ್ಲ.

ಗಂಗೊಳ್ಳಿ ಅಳಿವೆ ಸಮೀಪ ಈಚೆಗೆ ನಾಡ ದೋಣಿ ಮಗುಚಿರುವುದು

ದಡದಿಂದ ಕೆಲವೇ ಕಿ.ಮೀ. ದೂರದಲ್ಲಿ ದೋಣಿ ಅವಘಡ ಸಂಭವಿಸಿದರೂ ಕೂಡಲೇ ಹೋಗಿ ರಕ್ಷಣೆ ಮಾಡುವಂತಹ ಯಾವುದೇ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಮೀನುಗಾರರು. ಮೀನುಗಾರರೇ ದೋಣಿಗಳಲ್ಲಿ ರಕ್ಷಣಾ ಕಾರ್ಯ ಮಾಡುವಂತಹ ಅನಿವಾರ್ಯತೆ ಇದೆ. ಕರಾವಳಿ ಕಾವಲು ಪಡೆ ಮೊದಲಾದವುಗಳು ತಲುಪುವಾಗ ತಡವಾಗಿರುತ್ತದೆ ಎಂದು ಹೇಳುತ್ತಾರೆ.

ದುರಂತ ಸಂಭವಿಸಿದ ಕೂಡಲೇ ಸ್ಥಳಕ್ಕೆ ತೆರಳಬಹುದಾದ ಸುಸಜ್ಜಿತ ಬೋಟ್‌ಗಳನ್ನು ಕರಾವಳಿ ಕಾವಲು ಪೊಲೀಸ್‌ ಪಡೆಗೆ ನೀಡಬೇಕು. ಬೋಟ್‌ ಆಂಬುಲೆನ್ಸ್ ವ್ಯವಸ್ಥೆ ಬರುತ್ತದೆ ಎಂದು ಸಂಬಂಧಪಟ್ಟವರು ಹೇಳುತ್ತಲೇ ಇದ್ದಾರೆ. ಆದರೆ ಅದು ಇದುವರೆಗೂ ಸಾಕಾರವಾಗಿಲ್ಲ ಎಂದು ಹೇಳುತ್ತಾರೆ ಮೀನುಗಾರರು.

ಮಳೆಗಾಲದಲ್ಲಿ ಸಣ್ಣ ನಾಡದೋಣಿಗಳಲ್ಲಿ ಮೀನುಗಾರಿಕೆಗೆ ತೆರಳುವುದರಿಂದ ಇಂತಹ ದೋಣಿಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ತೀರದ ಸಮೀಪವೇ ಹೆಚ್ಚಿನ ಅವಘಡಗಳು ಸಂಭವಿಸುವುದರಿಂದ ಈ ಸಂದರ್ಭಗಳಲ್ಲಿ ಮೀನುಗಾರರನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಲ್ಪೆ ದಕ್ಕೆಯಿಂದ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸುತ್ತಿರುವ ನಾಡದೋಣಿ ಮೀನುಗಾರರು

‘ಕಡ್ಡಾಯವಾಗಿ ಲೈಫ್‌ ಜಾಕೆಟ್‌ ಧರಿಸಿ’

ಹವಾಮಾನ ಮನ್ಸೂಚನೆಗಳು ಮೊಬೈಲ್‌ ಮೂಲಕ ಸಿಗುತ್ತದೆ. ಕೆಲವೊಮ್ಮೆ ಕೇರಳದ ಮೀನುಗಾರರ ಮೂಲಕವೂ ಸಿಗುತ್ತದೆ. ಆದರೂ ಕೆಲವೊಮ್ಮೆ ತೂಫಾನ್‌ ಎದ್ದು ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಸಂಕಷ್ಟ ತರುತ್ತದೆ ಎಂದು ಮಲ್ಪೆಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ್‌ ಪಿ. ಸಾಲ್ಯಾನ್‌ ಹೇಳುತ್ತಾರೆ.

ಸಮುದ್ರಕ್ಕೆ ತೆರಳಿ ವಾಪಸ್‌ ಬರುವಾಗ ಹೆಚ್ಚಿನ ದೋಣಿ ದುರಂತಗಳು ಸಂಭವಿಸುತ್ತಿವೆ. ಪಡುಬಿದ್ರಿ ಮೊದಲಾದ ಕಡೆ ಮೀನುಗಾರಿಕಾ ದಕ್ಕೆಗಳಿಲ್ಲದ ಕಾರಣ ಅಲ್ಲಿನ ನಾಡದೋಣಿಯವರು ಮಲ್ಪೆಗೆ ಬರಬೇಕಾಗುತ್ತೆ ಎಂದು ಹೇಳುತ್ತಾರೆ ಅವರು. ಜೀವರಕ್ಷಕ ಸಾಧನಗಳನ್ನು ಸರ್ಕಾರವು ವಿತರಿಸುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಅದರ ವಿತರಣೆ ನಡೆದೇ ಇಲ್ಲ. ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ಪ್ರತಿಯೊಬ್ಬ ಮೀನುಗಾರನೂ ಲೈಫ್‌ ಜಾಕೆಟ್‌ ಧರಿಸಬೇಕು ಎಂದರು. ಗಂಗೊಳ್ಳಿಯಲ್ಲಿ ದೋಣಿ ದುರಂತ ಸಂಭವಿಸಿದಾಗ ಮೀನುಗಾರರ ಪತ್ತೆಗಾಗಿ ಡ್ರೋನ್‌ ಬಳಸಲಾಗಿದೆ. ಮೀನುಗಾರರ ಸುರಕ್ಷತೆಗೆ ಸಂಬಂಧಪಟ್ಟ ಇಲಾಖೆಗಳು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಪರಿಹಾರ ಮೊತ್ತ ಹೆಚ್ಚಿಸಿ’

ದೋಣಿ ದುರಂತದಲ್ಲಿ ಮೀನುಗಾರರು ಮೃತಪಟ್ಟರೆ ಅವರ ಕುಟುಂಬದವರಿಗೆ ರಾಜ್ಯದಲ್ಲಿ ₹10 ಲಕ್ಷವಷ್ಟೇ ಪರಿಹಾರ ನೀಡಲಾಗುತ್ತದೆ. ಆದರೆ ನೆರೆಯ ಕೇರಳ ರಾಜ್ಯದಲ್ಲಿ ಸರ್ಕಾರ ಸೊಸೈಟಿಗಳು ಸೇರಿ ₹20 ಲಕ್ಷದಿಂದ ₹25 ಲಕ್ಷ ಪರಿಹಾರ ನೀಡುತ್ತಿವೆ. ಇಲ್ಲೂ ಪರಿಹಾರದ ಹಣವನ್ನು ಹೆಚ್ಚಳ ಮಾಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರು ಮತ್ತು ಮೀನು ಕಾರ್ಮಿಕರ ಸಂಘದ (ಸಿಐಟಿಯು) ಜಿಲ್ಲಾ ಕಾರ್ಯದರ್ಶಿ ಕವಿರಾಜ್‌ ಎಸ್‌. ಕಾಂಚನ್ ಒತ್ತಾಯಿಸಿದ್ದಾರೆ.

ಕೇರಳದಲ್ಲಿ ಮನೆ ಇಲ್ಲದ ಮೀನುಗಾರರಿಗೆ ಉಚಿತ ವಸತಿ ನಿರ್ಮಾಣ ಸೊಸೈಟಿಗಳ ಮೂಲಕ ಉಚಿತವಾಗಿ ದಿನ ಬಳಕೆಯ ವಸ್ತುಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಮೀನುಗಾರರ ಕಲ್ಯಾಣ ಮಂಡಳಿ ರಚಿಸಬೇಕು. ಹಾಗಾದರೆ ಹೆಚ್ಚು ಪರಿಹಾರ ನೀಡಲು ಸಾಧ್ಯವಾಗುತ್ತದೆ ಮತ್ತು ಮೀನುಗಾರರ ಮಕ್ಕಳ ಶಿಕ್ಷಣಕ್ಕೂ ನೆರವಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಹವಾಮಾನ ಇಲಾಖೆ ನೀಡುವ ಮುನ್ಸೂಚನೆಯನ್ನು ತ್ವರಿತವಾಗಿ ಮೀನುಗಾರರಿಗೆ ತಲುಪಿಸಬೇಕು. ಲೈಫ್‌ ಜಾಕೆಟ್‌ ಸೇರಿದಂತೆ ಸುರಕ್ಷತಾ ಸಾಧನಗಳನ್ನು ಕೂಡಲೇ ವಿತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇವೆ’

ಭಾರತೀಯ ಹವಾಮಾನ ಇಲಾಖೆ ನೀಡುವ ಮನ್ನೆಚ್ಚರಿಕೆಗಳನ್ನು ನಾವು ಮೀನುಗಾರರ ಸಂಘಗಳಿಗೆ ನಿಯಮಿತವಾಗಿ ನೀಡುತ್ತೇವೆ. ಮುಂದಿನ ದಿನಗಳಲ್ಲಿ ‘ಟು ವೇ ಕಮ್ಯುನಿಕೇಷನ್‌ ಸಿಸ್ಟಂ’ ಮೂಲಕ ಹವಾಮಾನ ಮುನ್ನೆಚ್ಚರಿಕೆ ಮೀನಿನ ಲಭ್ಯತೆ ಮೊದಲಾದ ವಿಚಾರಗಳು ಆ್ಯಪ್‌ ಮೂಲಕ ಮೀನುಗಾರರಿಗೆ ಲಭಿಸಲಿದೆ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್‌ ತಿಳಿಸಿದರು.

ಅದಕ್ಕಾಗಿ ಉಪಗ್ರಹ ಆಧರಿತ ಟ್ರಾನ್ಸ್‌ಪಾಂಡರ್‌ಗಳನ್ನೂ ಮೀನುಗಾರರಿಗೆ ವಿತರಿಸಲಾಗುವುದು. ‘ನಭ ಮಿತ್ರ’ ಆ್ಯಪ್‌ನಲ್ಲಿ ಮಾಹಿತಿ ಲಭಿಸಲಿದೆ. ಮೀನುಗಾರರು ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಬೇಕು ಎಂದು ಮೀನುಗಾರರ ಸಂಘಗಳ ಸಭೆಯಲ್ಲೂ ಹೇಳುತ್ತೇವೆ. ಬೋಟ್‌ನವರು ಪರವಾನಗಿ ನವೀಕರಿಸಲು ಬರುವಾಗಲೂ ಕಟ್ಟುನಿಟ್ಟಿನ ಸೂಚನೆ ನೀಡುತ್ತೇವೆ ಎಂದು ಹೇಳಿದರು. ಲೈಫ್‌ ಜಾಕೆಟ್‌ ಹಾಕಿದರೆ ಬಲೆ ಹಾಕುವಾಗ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಮೀನುಗಾರರು ಅದನ್ನು ಹಾಕುವುದಿಲ್ಲ. ಪ್ರತಿ ವರ್ಷ ಇಲಾಖೆಯ ವತಿಯಿಂದ 200ರಷ್ಟು ಲೈಫ್‌ ಜಾಕೆಟ್‌ ವಿತರಿಸುತ್ತೇವೆ. ಸಮುದ್ರ ಪ್ರಕ್ಷುಬ್ಧವಾಗಿರುವಾಗ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.