ADVERTISEMENT

ಉಡುಪಿ | ಮಲ್ಪೆ ಫಿಶ್‌ಮಿಲ್ ಬಳಿ ಲೆಸ್ಸರ್ ಪ್ಲೆಮಿಂಗೊ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:44 IST
Last Updated 1 ಸೆಪ್ಟೆಂಬರ್ 2025, 4:44 IST
ಲೆಸ್ಸರ್‌ ಪ್ಲೆಮಿಂಗೊದ ಕಳೇಬರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಕ್ಷಿ ವೀಕ್ಷಕರು ಪರಿಶೀಲಿಸಿದರು
ಲೆಸ್ಸರ್‌ ಪ್ಲೆಮಿಂಗೊದ ಕಳೇಬರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಕ್ಷಿ ವೀಕ್ಷಕರು ಪರಿಶೀಲಿಸಿದರು   

ಉಡುಪಿ: ಕೆಲದಿನಗಳ ಹಿಂದೆ ಮಲ್ಪೆಯ ಫಿಶ್‌ಮಿಲ್‌ ಬಳಿಯ ಕೊಳದಲ್ಲಿ ಪತ್ತೆಯಾಗಿದ್ದ ಲೆಸ್ಸರ್‌ ಪ್ಲೆಮಿಂಗೊದ ಕಳೇಬರ ಭಾನುವಾರ ಕೊಳದ ಬಳಿ ಪತ್ತೆಯಾಗಿದೆ.

ಪಕ್ಷಿ ವೀಕ್ಷಣೆಗೆ ತೆರಳಿದ್ದವರು ಕಳೇಬರವನ್ನು ನೋಡಿದ್ದು, ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

‘ಪಕ್ಷಿಯ ಕಳೇಬರವನ್ನು ಬೈಲೂರಿನ ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದೇವೆ. ಪಶು ವೈದ್ಯರು ನೀಡುವ ವರದಿಯಿಂದ ಹಕ್ಕಿಯ ಸಾವಿನ ಕಾರಣ ತಿಳಿದು ಬರಲಿದೆ. ಫಿಶ್‌ಮಿಲ್‌ ಬಳಿಯ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಪಕ್ಷಿ ವೀಕ್ಷಣೆಗೆ ತೆರಳಿದ್ದವರು ಹಕ್ಕಿಯ ಕಳೇಬರ ನೋಡಿ ನಮಗೆ ಮಾಹಿತಿ ನೀಡಿದರು. ನಾವು ಸ್ಥಳಕ್ಕೆ ತೆರಳಿ ಕಳೇಬರ ನೋಡಿದ್ದೇವೆ. ಹಕ್ಕಿಯ ತಲೆ ಭಾಗದಲ್ಲಿ ಗಾಯದ ಗುರುತು ಇದೆ. ಯಾರಾದರೂ ಕಲ್ಲು ಹೊಡೆದಿರುವ ಸಾಧ್ಯತೆಯೂ ಇದೆ. ಅಂತಹ ಕೃತ್ಯ ಎಸಗಿದವರ ವಿರುದ್ಧ ಅರಣ್ಯ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪಕ್ಷಿ ವೀಕ್ಷಕ ತೇಜಸ್ವಿ ಎಸ್‌. ಆಚಾರ್ಯ ಆಗ್ರಹಿಸಿದ್ದಾರೆ.

‘ಲೆಸ್ಸರ್‌ ಫ್ಲೆಮಿಂಗೊ ವಿಶ್ವದ ಅತ್ಯಂತ ಚಿಕ್ಕ ಫ್ಲೆಮಿಂಗೊ ಹಕ್ಕಿಯಾಗಿದ್ದು, ಉಡುಪಿಗೆ ಭೇಟಿ ನೀಡಿರುವ ಅತ್ಯಂತ ಅಪರೂಪದ ಪಕ್ಷಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಲೆಸ್ಸರ್‌ ಫ್ಲೆಮಿಂಗೊವನ್ನು ಕೆಲದಿನಗಳ ಹಿಂದೆ ಪಕ್ಷಿ ವೀಕ್ಷಕರು ಮಲ್ಪೆಯಲ್ಲಿ ಗುರುತಿಸಿದ್ದರು. ಬಳಿಕ ಉಡುಪಿಯ ಅನೇಕ ಮಂದಿ ಪಕ್ಷಿ ವೀಕ್ಷಕರು ಸ್ಥಳಕ್ಕೆ ತೆರಳಿ ಪಕ್ಷಿಯನ್ನು ವೀಕ್ಷಣೆ ಮಾಡಿದ್ದರು. ಉಡುಪಿಯಲ್ಲಿ ಈ ಹಕ್ಕಿ ಕಂಡು ಬಂದಿರುವುದು ಇದೇ ಮೊದಲ ಬಾರಿ ಎಂದು ಪಕ್ಷಿ ವೀಕ್ಷಕರು ತಿಳಿಸಿದ್ದಾರೆ.

ಒಂಟಿಯಾಗಿದ್ದ ಈ ಹಕ್ಕಿಯು ಮಲ್ಪೆಯ ಫಿಶ್‌ಮಿಲ್‌ ಬಳಿಯ ಕೊಳಚೆ ತುಂಬಿದ ಕೊಳದಲ್ಲೇ ಹಲವು ದಿನಗಳಿಂದ ಬೀಡುಬಿಟ್ಟಿತ್ತು.

ಲೆಸ್ಸರ್‌ ಫ್ಲೆಮಿಂಗೊ ಕಳೇಬರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.