ADVERTISEMENT

ಗಮನ ಸೆಳೆದ ಫಲಪುಷ್ಪ ಪ್ರದರ್ಶನ

ಅತ್ಯಾಕರ್ಷಕ ಹೂವಿನ ಮಾದರಿಗಳಿಗೆ ಮನಸೋತ ಪುಷ್ಪಪ್ರಿಯರು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 15:37 IST
Last Updated 29 ಫೆಬ್ರುವರಿ 2020, 15:37 IST
ದಾರ್ಶನಿಕರ ಹಾಗೂ ಪ್ರಾಣಿಗಳ ಮಾದರಿ ಕೆತ್ತನೆ ಗಮನ ಸೆಳೆಯಿತು.ಪ್ರಜಾವಾಣಿ ಚಿತ್ರ/ ಉಮೇಶ್‌ ಮಾರ್ಪಳ್ಳಿ
ದಾರ್ಶನಿಕರ ಹಾಗೂ ಪ್ರಾಣಿಗಳ ಮಾದರಿ ಕೆತ್ತನೆ ಗಮನ ಸೆಳೆಯಿತು.ಪ್ರಜಾವಾಣಿ ಚಿತ್ರ/ ಉಮೇಶ್‌ ಮಾರ್ಪಳ್ಳಿ   

ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿರುವ ರೈತ ಸೇವಾ ಕೇಂದ್ರದ ಆವರಣದಲ್ಲಿ ಶನಿವಾರ ಆರಂಭಗೊಂಡ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.

ಗುಲಾಬಿ, ಸೇವಂತಿಗೆ, ಚೆಂಡು ಹೂ, ಗ್ಲಾಡಿಯೋಲಸ್‌, ಕಾರ್ನೇಶನ್‌ ಹೂಗಳಿಂದ ರಚಿಸಲಾದ 24 ಅಡಿ ಉದ್ದದ ಹಡಗಿನ ಕಲಾಕೃತಿ ವಿಶೇಷ ಆಕರ್ಷಣೆಯಾಗಿತ್ತು. ಇದಕ್ಕೆ 30 ಸಾವಿರ ಹೂಗಳನ್ನು ಬಳಸಲಾಗಿದೆ. ಹಾಗೆಯೇ ವಿವಿಧ ಹೂಗಳಿಂದ ಸಿದ್ಧಪಡಿಸಿರುವ ಅಕ್ಟೋಪಸ್‌, ಜೋಡಿ ಮೀನುಗಳ ಕಲಾಕೃತಿ, ಸಮುದ್ರ ಕುದುರೆ, ಸಮುದ್ರದ ಚಿಪ್ಪಿನಲ್ಲಿನ ಮುತ್ತು, ಸ್ಟಾರ್‌ ಫಿಶ್‌ ಮಾದರಿಗಳು ಸಾರ್ವಜನಿಕರ ಗಮನ ಸೆಳೆದವು.

ಕಲಾವಿದ ಭರತ್‌ ಎಸ್‌. ಅಡ್ವೆ ಕಲ್ಲಂಗಡಿ ಹಣ್ಣುಗಳಲ್ಲಿ ರಚಿಸಿರುವ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಗಳ ಚಿತ್ರ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ವಿವೇಕಾನಂದ, ಸುಭಾಷ್‌ ಚಂದ್ರ ಬೋಸ್‌, ಭಗತ್‌ ಸಿಂಗ್‌, ಸರ್‌.ಎಂ.ವಿಶ್ವೇಶ್ವರಯ್ಯ, ವಾಜಪೇಯಿ, ನರೇಂದ್ರ ಮೋದಿ, ವಿರಾಟ್‌ ಕೊಹ್ಲಿ, ಕುವೆಂಪು, ವಿಶ್ವಪ್ರಸನ್ನ ಶ್ರೀಗಳು, ವಿಂಗ್‌ ಕಮಾಂಡರ್‌ ಅಭಿನಂದನ್‌, ಶ್ರೀಕೃಷ್ಣ, ಹನುಮಾನ್‌ ಹಾಗೂ ಶಿವಾಜಿಯ ಕಲಾಕೃತಿಗಳನ್ನು ಜನರು ಕಣ್ತುಂಬಿಕೊಂಡರು.

ADVERTISEMENT

ಹೂ ಕುಂಡಗಳಲ್ಲಿ ಹಾಗೂ ಪಾಲಿಬ್ಯಾಗ್‌ಗಳಲ್ಲಿ ಬೆಳೆಸಬಹುದಾದ ಅಲಂಕಾರಿಕ ಪುಷ್ಪಗಳಾದ ಪೆಟೋನಿಯ, ಸ್ಯಾಲ್ವಿಯಾ, ಸೆಲೋಶಿಯಾ, ಕಾಕ್ಸ್‌ ಕೂಂಬ್‌, ಗಾಝೀನಿಯಾ, ಡಯಾಂತಸ್‌, ಥೊರೇನಿಯಾ, ಗುಲಾಬಿ, ದಾಸವಾಳ, ಸೇವಂತಿಗೆ, ಚೆಂಡು ಹೂ, ಕಳಂಚಿಯಾ ಪುಷ್ಪಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸೆಲ್ಫಿ ಮತ್ತು ಫೋಟೋ ಪ್ರಿಯರಿಗಾಗಿ ವಿವಿಧ ಬಗೆಯ ಹೂವಿನಿಂದ ರಚಿಸಿರುವ ಹಾರ್ಟ್‌ ಮಾದರಿಯ ಕಲಾಕೃತಿಗಳ ಮುಂದೆ ಸಾರ್ವಜನಿಕರು ಮತ್ತು ಮಕ್ಕಳು ಫೋಟೊ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಫಲಪುಷ್ಪ ಪ್ರದರ್ಶನ ಆವರಣದ ಹಿಂಭಾಗದಲ್ಲಿ ಕೃಷಿ ಸಂಬಂಧಿತ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ವಸ್ತುಪ್ರದರ್ಶನ, ನರ್ಸರಿ ಗಿಡಗಳ ಮಾರಾಟ ಮತ್ತು ಪ್ರದರ್ಶನ, ವಿವಿಧ ಬೀಜಗಳ ಮಾರಾಟ ಮಳಿಗೆಗಳಿದ್ದು, ಆಸಕ್ತರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.