ADVERTISEMENT

ಕಾಲು ಸಂಕ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಜಿಲ್ಲೆಯ ಹಲವೆಡೆ ಅಪಾಯಕಾರಿ ಕಚ್ಚಾ ಕಾಲು ಸಂಕಗಳೇ ಜನರಿಗೆ ಆಸರೆ: ನೀಗದ ಬವಣೆ

ನವೀನ್‌ಕುಮಾರ್ ಜಿ
Published 28 ಜುಲೈ 2025, 7:15 IST
Last Updated 28 ಜುಲೈ 2025, 7:15 IST
ಉಡುಪಿಯ ಬೈಲಕೆರೆಯ ಗೋವಿಂದ ಪುಷ್ಕರಣಿ ರಸ್ತೆಯ ಕಾಲು ಸಂಕದ ತಡೆಬೇಲಿ ಮುರಿದು ಬಿದ್ದಿದೆ
–ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ಉಡುಪಿಯ ಬೈಲಕೆರೆಯ ಗೋವಿಂದ ಪುಷ್ಕರಣಿ ರಸ್ತೆಯ ಕಾಲು ಸಂಕದ ತಡೆಬೇಲಿ ಮುರಿದು ಬಿದ್ದಿದೆ –ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   

ಉಡುಪಿ: ಗ್ರಾಮೀಣ ಪ್ರದೇಶದ ಸಂಪರ್ಕ ಸೇತುವಾದ ಕಾಲುಸಂಕಗಳ ಸಮಸ್ಯೆ ಜಿಲ್ಲೆಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ. ಬಹಳಷ್ಟು ಕಡೆ ತೋಡುಗಳನ್ನು ದಾಟಲು ಈಗಲೂ ಮರದ ದಿಮ್ಮಿ ಹಾಸಿದ ಕಚ್ಚಾ ಕಾಲುಸಂಕಗಳೇ ಜನರಿಗೆ ಆಧಾರವಾಗಿವೆ.

ಮಳೆಗಾಲದಲ್ಲಿ ತೋಡುಗಳಲ್ಲಿ ರಭಸದಿಂದ ನೀರು ಹರಿಯುವಾಗಲೂ ವಿದ್ಯಾರ್ಥಿಗಳು ಸೇರಿದಂತೆ ಜನರು ಅವುಗಳನ್ನು ದಾಟಲು ಜೀವ ಪಣಕ್ಕಿಟ್ಟು ಮರದ ಕಾಲುಸಂಕಗಳಲ್ಲೇ ತೆರಳಬೇಕಾದ ಅನಿವಾರ್ಯತೆ ಇದೆ.

ಜಿಲ್ಲೆಯ ಕುಂದಾಪುರ, ಬೈಂದೂರು ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ನೂರಾರು ಕಾಲು ಸಂಕಗಳು ನಿರ್ಮಾಣವಾಗಬೇಕಿದೆ ಎನ್ನುತ್ತಾರೆ ಜನರು. ಅರಣ್ಯ ಇಲಾಖೆಯ ಅನುಮತಿ ಸಿಗದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಕೆಲವೆಡೆ ಕಾಲು ಸಂಕಗಳ ನಿರ್ಮಾಣವಾಗಿಲ್ಲ ಎಂದೂ ಹೇಳಿದ್ದಾರೆ.

ADVERTISEMENT

ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕೆಲವು ಕಾಲು ಸಂಕಗಳು ಶಿಥಿಲಾವಸ್ಥೆಗೆ ತಲುಪಿದರೆ, ಇನ್ನು ಕೆಲವು ಕಾಲುಸಂಕಗಳ ರಕ್ಷಣಾ ಬೇಲಿಗಳು ಇಲ್ಲದೆ ಅಪಾಯ ಆಹ್ವಾನಿಸುತ್ತಿವೆ.

ಪ್ರತಿ ಬಾರಿಯೂ ಸಂಬಂಧಪಟ್ಟವರು ಕಾಲು ಸಂಕ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬಂದೇ ಇಲ್ಲ ಎಂದು ದೂರುತ್ತಾರೆ ಜನರು.

ಜಿಲ್ಲೆಯಲ್ಲಿ ಕಾಲುಸಂಕಗಳ ನಿರ್ಮಾಣಕ್ಕಾಗಿ ₹8 ಕೋಟಿ ಬಿಡುಗಡೆಯಾಗಿದೆ ಎಂದು ಮೇ ಯಲ್ಲಿ ಜಿಲ್ಲೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ಕಾಲು ಸಂಕಗಳ ನಿರ್ಮಾಣ ನಡೆಯುತ್ತಿಲ್ಲ. ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳ ಅಧೀನದಲ್ಲಿ ನಿರ್ಮಾಣ ನಡೆಯುತ್ತಿದ್ದು, ಹಲವೆಡೆ ಕಾಲು ಸಂಕಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

‘ 450 ಕಾಲು ಸಂಕಗಳ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದರಲ್ಲಿ 129 ಕಾಲು ಸಂಕಗಳ ನಿರ್ಮಾಣಕ್ಕೆ ಮಂಜೂರಾತಿ ಲಭಿಸಿದೆ. 321 ಕಾಲು ಸಂಕಗಳ ಮಂಜೂರಾತಿ ಬಾಕಿ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ.

ಬನ್ನಂಜೆ ಗರೋಡಿ ರಸ್ತೆಯ ಕಾಲುಸಂಕವೊಂದು ತಡೆಬೇಲಿ ಇಲ್ಲದೆ ಅಪಾಯ ಆಹ್ವಾನಿಸುತ್ತಿದೆ

‘400 ಕಾಲು ಸಂಕಗಳ ಅಗತ್ಯವಿದೆ’

ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ 400 ಕಾಲು ಸಂಕಗಳ ಅಗತ್ಯ ಇದೆ. ಅದಕ್ಕಾಗಿ ಸರ್ಕಾರ ಅನುದಾನ ನೀಡಬೇಕು. ವಿವಿಧ ಖಾಸಗಿ ಸಂಸ್ಥೆಗಳ ಸಿಎಸ್‌ಆರ್‌ ಅನುದಾನ ಬಳಸಿ ಅಂದಾಜು 50 ರಷ್ಟು ಕಾಲುಸಂಕ ನಿರ್ಮಿಸಲು ನಾವು ಚಿಂತನೆ ನಡೆಸಿದ್ದೇವೆ. ಅದರಲ್ಲಿ 12 ರಷ್ಟು ಪೂರ್ಣಗೊಂಡಿವೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು.

ಮೊದಲು ನರೇಗಾ ಯೋಜನೆ ಅಡಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಅವಕಾಶ ಇತ್ತು. ಈಗ ಅದನ್ನು ನಿಲ್ಲಿಸಲಾಗಿದೆ. ಹಿಂದಿನ ಸರ್ಕಾರ ಕಾಲು ಸಂಕಗಳ ನಿರ್ಮಾಣಕ್ಕಾಗಿ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅದನ್ನು ಈಗಿನ ಸರ್ಕಾರ ತಡೆಹಿಡಿದಿದೆ. ಅಲ್ಲದೆ ಹಿಂದೆ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಲು ಸಂಕಗಳಿಗಾಗಿ ₹ 50 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದರು ಆ ಹಣ ಕೂಡ ಬಂದೇ ಇಲ್ಲ ಎಂದು ಅವರು ಹೇಳಿದರು.

ಅನುದಾನಕ್ಕೆ ಕಾಯುತ್ತಿವೆ ಕಾಲು ಸಂಕಗಳು

ಕಾರ್ಕಳ: ತಾಲ್ಲೂಕಿನ ವಿವಿಧೆಡೆ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಬಹುದಾದ 7ಮೀ.ಗಿಂತ ಕಡಿಮೆ ಉದ್ದದ ಕಾಲು ಸಂಕಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದರೂ ಅನುದಾನದ ಕೊರತೆಯಿಂದ ಹೆಚ್ಚಿನವು ಪೂರ್ಣಗೊಂಡಿಲ್ಲ ಎಂದು ಜನರು ದೂರಿದ್ದಾರೆ.

ಕೆಲವು ಕಡೆಗಳಲ್ಲಿ ಸ್ಥಳೀಯರೇ ತಾತ್ಕಾಲಿಕ ನೆಲೆಯಲ್ಲಿ ಕಾಲು ಸಂಕ ನಿರ್ಮಿಸಿಕೊಂಡಿದ್ದಾರೆ. ತಾಲ್ಲೂಕಿನ ಮುಡಾರು ವ್ಯಾಪ್ತಿಯಲ್ಲಿ ಹಳೆ ಸೇತುವೆಯನ್ನು ಸಂಪೂರ್ಣ ಕೆಡವಿ ಹೊಸ ಸೇತುವೆ ನಿರ್ಮಾಣದ ವೇಳೆ ತಾತ್ಕಲಿಕವಾಗಿ ಮೋರಿ ಪೈಪ್ ಅಳವಡಿಸಿ ರಸ್ತೆ ನಿರ್ಮಿಸಿದ್ದರು.

ಅದು ಮಳೆಗೆ ಕೊಚ್ಚಿ ಹೋಗಿತ್ತು. ಇದರಿಂದ ನೂರಾರು ಮಂದಿ ತೊಂದರೆಗೆ ಒಳಗಾದರು. ಮುಡಾರು ಗ್ರಾಮದಿಂದ ರಾಮೇರಗುತ್ತು ಎಂಬಲ್ಲಿಗೆ ಹೋಗಿಬರಲು ಸ್ಥಳೀಯರು ತಾತ್ಕಲಿಕವಾಗಿ ಅಡಿಕೆ ಮರದಿಂದ ಕಾಲು ಸುಂಕವನ್ನು ನಿರ್ಮಿಸಿದ್ದಾರೆ.

ನೀರೆ ಕಣಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂದೆಟ್ಟು ನೀರೆ ಎಂಬಲ್ಲಿ ಹುಣಸೆಬೆಟ್ಟಿನಿಂದ ಕೊಡ್ಸರಬೆಟ್ಟುವಿನ ಕಾಲು ಸಂಕ ಬಿದ್ದು ಹೋಗಿದೆ. ರೆಂಜಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಂಬೆಟ್ಟು ದಂಬೆಗುಂಡಿ ಎಂಬಲ್ಲಿನ ಮರದ ಸಂಕ ತೀರಾ ಹಳೆಯದಾಗಿದೆ. ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಈ ಸಂಕದ ಮೂಲಕ ಹೋಗಿ ಬರುತ್ತಿದ್ದಾರೆ.

ಬೋಳ ಗ್ರಾಮದ ಶಂಕರ ಮೂಲ್ಯ ಎನ್ನುವವರ ಮನೆ ಸಮೀಪದಲ್ಲಿ ಹಾಗೂ ಕಂಬಲಗುತ್ತು ರಸ್ತೆಯಲ್ಲಿ ಕಾಲು ಸಂಕದ ತೀರಾ ಅಗತ್ಯವಿದೆ ಎಂದೂ ಜನರು ತಿಳಿಸಿದ್ದಾರೆ.

ಕಾರ್ಕಳ ತಾಲ್ಲೂಕಿನ ಮುಡಾರು ಗ್ರಾಮದಿಂದ ರಾಮೇರಗುತ್ತು ಎಂಬಲ್ಲಿಗೆ ಹೋಗಿಬರಲು ತಾತ್ಕಾಲಿಕವಾಗಿ ನಿರ್ಮಿಸಿದ ಅಡಿಕೆ ಮರದ ಕಾಲು ಸುಂಕ

ಮತ್ತಾವು ಕಾಲುಸಂಕಕ್ಕೆ ಮುಕ್ತಿ ಎಂದು?

ಹೆಬ್ರಿ: ನಕ್ಸಲ್‌ ಪೀಡಿತ ಪ್ರದೇಶವಾಗಿದ್ದ ಕಬ್ಬಿನಾಲೆಯ ಮತ್ತಾವಿನ ಮನೆಮಂದಿಯ ಹಲವು ದಶಕಗಳ ಬೇಡಿಕೆಯಾಗಿದ್ದ ಮತ್ತಾವು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹2 ಕೋಟಿ ಅನುದಾನ ಮಂಜೂರು ಮಾಡಿದೆ. ಏಪ್ರಿಲ್‌ ತಿಂಗಳಿನಲ್ಲಿ ಅನುದಾನ ಮಂಜೂರುಗೊಂಡರೂ ಇನ್ನೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ಮತ್ತಾವು ಮಂದಿ ಮಳೆಗಾಲದಲ್ಲಿ ಕಚ್ಚಾ ಕಾಲು ಸಂಕ ಬಳಸಿ ಹೊಳೆ ದಾಟುತ್ತಿದ್ದಾರೆ.

ಸುಮಾರು 6 ತಿಂಗಳ ಕಾಲ ಹೊಳೆ ದಾಟಲು ಹರಸಾಹಸ ಪಡಬೇಕಾಗಿದೆ. ಆರೋಗ್ಯ ಹದಗೆಟ್ಟರೆ ಹೊತ್ತುಕೊಂಡು ಸಾಗಬೇಕು.

ಬಹುತೇಕರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಜೋರು ಮಳೆಯಾದರೆ ವಿದ್ಯಾರ್ಥಿಗಳು ರಜೆ ಮಾಡಬೇಕು. ಕಾಲುಸಂಕಕ್ಕೆ ಹೆದರಿ ಕೆಲವರು ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಿದ್ದರು. ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರುಗೊಳಿಸಿದ್ದು ಮತ್ತಾವು ಮಂದಿನ ಮುಖದಲ್ಲಿ ನಗುಮೂಡಿಸಿದೆ. ಕಳೆದ 4 ದಶಕಗಳಿಂದ ಕಬ್ಬಿನಾಲೆಯ ಮತ್ತಾವು ಸೇತುವೆ ನಿರ್ಮಿಸಿ ಕೊಡಿ ಎಂಬ ಮಲೆಕುಡಿಯರ ಕೂಗು ನಿರಂತರವಾಗಿತ್ತು.

ದುರವಸ್ಥೆಯಲ್ಲಿದೆ ಕಾಲುಸಂಕ

ಪಡುಬಿದ್ರಿ: ಕೋಡಿಯಿಂದ ಹೆಜಮಾಡಿಗೆ ನಡೆದುಕೊಂಡು ಹೋಗುವ ದಾರಿಯಲ್ಲಿ ಕಡವಿನ ಬಾಗಿಲು ಗೋಪಾಲ ಪೂಜಾರಿ ಎಂಬುವವರ ಮನೆ ಬಳಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಾಲು ಸಂಕ ದುರವಸ್ಥೆಯಲ್ಲಿದೆ. ಕಾಲು ಸಂಕ ಕುಸಿಯುವ ಭೀತಿಯಲ್ಲಿದ್ದು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಎರ್ಮಾಳ್ ಗ್ರಾಮದ ಅಡ್ವೆಕೋಡಿ ಪ್ರದೇಶದಲ್ಲಿ ಕಾಲು ಸಂಕವಿಲ್ಲದೆ ಜನರಿಗೆ ತೊಂದರೆಯಾಗುತ್ತಿದೆ.

ಕಾಲು ಸಂಕ ದುರಸ್ತಿ ಅಗತ್ಯ

ಬೈಂದೂರು: ತಾಲ್ಲೂಕಿನ ಕಾಲ್ತೋಡು ಗ್ರಾಮದ ಚಪ್ಪರಿಕೆ ಕೇರಿಗೋಳಿ ಬಲಗೋಣು ಯಳಜಿತ್ ಗ್ರಾಮದ ಸಾತೇರಿ ಹೆಜ್ಜಾಲು ಕಡಕೋಡು ನಿರೋಡಿ ಯಡ್ತರೆ ಗ್ರಾಮದ ಕಡ್ಕೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಲು ಸಂಕಗಳ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ.

ಬೈಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಾಡಿದ ಸರ್ವೇಯಲ್ಲಿ ಅಂದಾಜು 246 ಕಾಲುಸಂಕವಿದ್ದು ಅದರಲ್ಲಿ 71 ತೀರ ಕೆಟ್ಟ ಸ್ಥಿತಿಯಲ್ಲಿದೆ. ಅವುಗಳ ದುರಸ್ತಿ ಅಥವಾ ಪುನರ್ ನಿರ್ಮಾಣ ಆಗಬೇಕಾಗಿದೆ. ಇದರ ಜತೆಗೆ ಸುಮಾರು ಕಡೆಗಳಲ್ಲಿ ಹೊಸದಾಗಿ ಕಾಲು ಸಂಕ ಆಗಬೇಕಿದೆ. ಹೀಗಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುಸಂಕಗಳ ತುರ್ತು ಅವಶ್ಯಕತೆ ಹೆಚ್ಚಿದೆೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಪೂರಕ ಮಾಹಿತಿ: ವಾಸುದೇವ ಭಟ್‌, ಸುಕುಮಾರ್‌ ಮುನಿಯಾಲ್‌, ಹಮೀದ್‌ ಪಡುಬಿದ್ರಿ, ವಿಶ್ವನಾಥ ಆಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.