ಅಕ್ಷತಾ ಪೂಜಾರಿ
ಉಡುಪಿ: ಬಾಲ್ಯದಲ್ಲಿ ಅಥ್ಲೆಟಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ ದಿಢೀರ್ ಒಮ್ಮಿಂದೊಮ್ಮಲೇ ತಮ್ಮ ಕ್ಷೇತ್ರವನ್ನು ಬದಲಿಸಿದರು. ಇದರಿಂದ ಸಾಧನೆಗೆ ಮತ್ತಷ್ಟು ಅವಕಾಶಗಳು ಲಭಿಸಿದವು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಸಂಭ್ರಮಿಸುವಂತಾಯಿತು.
ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೋಮ್‌ನಲ್ಲಿ ಈಚೆಗೆ ನಡೆದ ಏಷ್ಯಾ–ಫೆಸಿಫಿಕ್–ಆಫ್ರಿಕನ್ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಗ್ರಾಮದ ಹೊಸಮನೆಯ ಅಕ್ಷತಾ ಪೂಜಾರಿ ದೂರ ಅಂತರದ ಓಟ ಮತ್ತು ಹ್ಯಾಮರ್ ಥ್ರೋದಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದರು. ಪಿಯುಸಿ ಓದುತ್ತಿದ್ದಾಗ ರಾಜ್ಯ ಮಟ್ಟದ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು ಪದವಿ ಪಡೆಯುತ್ತಿದ್ದಾಗ ರಾಜ್ಯ ಮಟ್ಟದ ಹ್ಯಾಮರ್ ಥ್ರೋದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಭಾರತದ 12 ಲಿಫ್ಟರ್‌ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಸೆನ್ ಸ್ಟೇಷನ್‌ನಲ್ಲಿ ಎಎಸ್ಐ ಆಗಿರುವ ವಿಜಯ ಕಾಂಚನ್ ಮತ್ತು ಎನ್‌ಎಂಪಿಎದಲ್ಲಿ ಗುತ್ತಿಗೆ ಆಧಾರದ ಉದ್ಯೋಗಿ ಕಾರ್ಕಳದ ಅಕ್ಷತಾ ಕರ್ನಾಟಕದಿಂದ ತೆರಳಿದ್ದ ಲಿಫ್ಟರ್‌ಗಳು. ಅಕ್ಷತಾ ಮಹಿಳೆಯರ 52 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಅವರು ಇಕ್ವಿಪ್ಡ್ ವಿಭಾಗದಲ್ಲಿ 92.5 ಕೆಜಿ ಭಾರ ಎತ್ತಿದ್ದರು. ಅವರ ಗುರು ವಿಜಯ ಕಾಂಚನ್ ಪುರುಷರ 105 ಕೆಜಿ ವಿಭಾಗದಲ್ಲಿ 180 ಕೆಜಿ ಎತ್ತಿದ್ದರು. ಇಕ್ವಿಪ್ಡ್ ಮತ್ತು ಅನ್ ಇಕ್ವಿಪ್ಡ್ ವಿಭಾಗಗಳೆರಡರಲ್ಲೂ ಚಿನ್ನ ಗೆದ್ದಿರುವ ಅವರು ಇಕ್ವಿಪ್ಡ್ ವಿಭಾಗದಲ್ಲಿ ಉತ್ತಮ ಲಿಫ್ಟರ್ ಎನಿಸಿಕೊಂಡಿದ್ದರು.
ಗ್ರಾಮೀಣ ಪರಿಸರದಲ್ಲಿ ಬೆಳೆದ ಅಕ್ಷತಾ ಅಥ್ಲೆಟಿಕ್ಸ್‌ನಿಂದ ಪವರ್ ಲಿಫ್ಟ್ ಕಡೆಗೆ ಹೊರಳಿದ ನಂತರ ನಿರಂತರವಾಗಿ ಪದಕಗಳನ್ನು ಗೆಲ್ಲುತ್ತ ಬಂದಿದ್ದಾರೆ. 2011ರ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, 2014ರಲ್ಲಿ ಅಮೆರಿಕದ ಲಾಸ್ ವೇಗಸ್‌ನಲ್ಲಿ ನಡೆದ ವಿಶ್ವ ಬೆಂಚ್‌ಪ್ರೆ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ, ದುಬೈನಲ್ಲಿ 2018ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್ ಚಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ, 2022ರಲ್ಲಿ ಕಜಕಿಸ್ತಾನದಲ್ಲಿ ನಡೆದ ವಿಶ್ವ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರು ನಿಟ್ಟೆಯ ಎನ್‌ಎಸ್‌ಎಎಂ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಎಚ್‌ಆರ್‌ಡಿ ಪೂರೈಸಿದ್ದಾರೆ.
ಬೋಳದ ಭೋಜ ಪೂಜಾರಿ ಮತ್ತು ಪ್ರೇಮಾ ಅವರ ಪುತ್ರಿ ಅಕ್ಷತಾ, ‘ಏಷ್ಯಾ–ಫೆಸಿಫಿಕ್–ಆಫ್ರಿಕನ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ವಿಜಯ್ ಕಾಂಚನ್ ಅವರು ತರಬೇತಿ ನೀಡಿದ್ದಾರೆ’ ಎಂದು ತಿಳಿಸಿದರು. ವಿಜಯ್ ಅವರ ಬಳಿ ತರಬೇತಿ ಪಡೆಯುವ ಮೊದಲು ಈಶ್ವರ್ ಕಟೀಲ್, ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಅಭ್ಯಾಸ ಮಾಡಿದ್ದೇನೆ. ಈಗ ಹಳೆಯಂಗಡಿ ಮತ್ತು ಬೆಳ್ಮಣ್‌ನ ಜಿಮ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.