ADVERTISEMENT

ಹಣ್ಣು ತರಕಾರಿ ಸಾಗಾಟಕ್ಕೆ ಕ್ರಮ

ಹೊರ ಜಿಲ್ಲೆ,ರಾಜ್ಯಗಳಿಗೆ ಸಾಗಿಸಲು ವಾಹನಗಳಿಗೆ ಅನುಮತಿ: ಡಿಸಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 15:02 IST
Last Updated 1 ಏಪ್ರಿಲ್ 2020, 15:02 IST

ಉಡುಪಿ: ರೈತರು ಬೆಳೆದಿರುವ ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸ್ ಸೇರಿದಂತೆ ಹಣ್ಣು ಹಾಗೂ ತರಕಾರಿಗಳನ್ನು ಸ್ಥಳೀಯ, ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳ ಮಾರುಕಟ್ಟೆಗೆ ಸಾಗಿಸಲು 7 ವಾಹನಗಳಿಗೆ ಅನುಮತಿ ಪತ್ರ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾದ್ಯವಾಗದೆ ಸಂಕಷ್ಟ ಅನುಭವಿಸುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ತಕ್ಷಣ ನೆರವಿಗೆ ದಾವಿಸುವಂತೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ 25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್‌ನಲ್ಲಿ 9,732 ಮೆ.ಟನ್ ಅನಾನಸ್‌ ಉತ್ಪಾದನೆಯಾಗುವ ಅಂದಾಜಿದೆ.

ಈ ಪೈಕಿ 6 ಮೆ.ಟನ್ ಮಟ್ಟುಗುಳ್ಳವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ, 82 ಮೆ.ಟನ್ ಕಲ್ಲಂಗಡಿಯನ್ನು ಮಂಗಳೂರು, ಉತ್ತರ ಕನ್ನಡ, ದಾರವಾಡ ಜಿಲ್ಲೆಗೆ ಹಾಗೂ 13 ಮೆ.ಟನ್ ಅನಾನಸ್ ಅನ್ನು ಶಿವಮೊಗ್ಗ, ಬೆಳ್ತಂಗಡಿಗೆ, 20 ಮೆ.ಟನ್ ಬಾಳೆ ಹಣ್ಣನ್ನು ಉತ್ತರ ಕನ್ನಡ, ಬೆಳ್ತಂಗಡಿಗೆ ಹಾಗೂ 10 ಮೆ.ಟನ್ ಪಪ್ಪಾಯವನ್ನು ಉತ್ತರ ಕನ್ನಡ ಜಿಲ್ಲೆಗೆ ಕಳುಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣ್ಣುಗಳ ಸಗಟು ವ್ಯಾಪಾರಸ್ಥರ ಸಭೆ ಕರೆದು, ರೈತರಿಂದ 35 ಮೆ.ಟನ್ ಅನಾನಸ್‌, 5,000 ಗೊನೆ ಬಾಳೆ, 55 ಮೆ.ಟನ್ ಕಲ್ಲಂಗಡಿಯನ್ನು ಖರೀದಿಸಿ ಮಾರಾಟ ಮಾಡುವಂತೆ ಸೂಚನೆ ನೀಡಿರುವುದಾಗಿಯೂ ಡಿಸಿ ತಿಳಿಸಿದ್ದಾರೆ.

ಲಾಕ್‌ಡೌನ್ ವಿನಾಯಿತಿ:ಜಿಲ್ಲಾ ವ್ಯಾಪ್ತಿಯ ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ. ರೈತರು ಬೆಳೆದಿರುವ ಹಾಗೂ ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಬಹುದು.

ಸಗಟು ವ್ಯಾಪಾರಿಗಳಿಗೂ ಖರೀದಿಸಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಸಗಟು ವ್ಯಾಪಾರಿಗಳು ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಒದಗಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಬೇಕು. ‌

ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಉಡುಪಿ ಹಾಗೂ ಕಾರ್ಕಳ: 9481440812, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಕುಂದಾಪುರ- 9900565469 ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.