ADVERTISEMENT

ಸಂಗೀತಲೋಕದ ಗಂಧರ್ವ ಗಮಕಿ ಚಂದ್ರಶೇಖರ ಕೆದ್ಲಾಯ ಹಾರ್ಯಾಡಿ ನೆನಪು ಮಾತ್ರ

ಇಂದು ಬೆಳಿಗ್ಗೆ 9ರಿಂದ 11ರವರೆಗೆ ಬ್ರಹ್ಮಾವರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

ಎ.ಶೇಷಗಿರಿ ಭಟ್ಟ‌
Published 24 ಜನವರಿ 2023, 15:47 IST
Last Updated 24 ಜನವರಿ 2023, 15:47 IST
ಚಂದ್ರಶೇಖರ ಕೆದ್ಲಾಯ
ಚಂದ್ರಶೇಖರ ಕೆದ್ಲಾಯ   

ಬ್ರಹ್ಮಾವರ: ಕವಿ ದಿ.ಗೋಪಾಲಕೃಷ್ಣ ಅಡಿಗರ ಅನೇಕ ಕವನಗಳನ್ನು ಅವರ ಮುಂದೆಯೇ ಹಾಡಿ ಅವರಿಂದ ಸೈ ಅನ್ನಿಸಿಕೊಂಡ ಅಪರೂಪ ವ್ಯಕ್ತಿ, ಸಂಗೀತಲೋಕದ ಗಂಧರ್ವ ಗಮಕಿ ಚಂದ್ರಶೇಖರ ಕೆದ್ಲಾಯ ಹಾರ್ಯಾಡಿ ಇನ್ನು ನೆನಪು ಮಾತ್ರ. ಅವರ ಅಗಲುವಿಕೆ ಅಭಿಮಾನಿಗಳಲ್ಲಿ ತೀವ್ರ ನೋವುಂಟು ಮಾಡಿದೆ.

ಅಡಿಗರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರ ಚುನಾವಣಾ ಪ್ರಚಾರದ ಸಭೆಗಳಲ್ಲಿ ಅವರ ಗೀತೆಗಳನ್ನು ಹಾಡಿ ಜನಮೆಚ್ಚುಗೆಯನ್ನು ಪಡೆದವರು ಕೆದ್ಲಾಯರು. ಅವರು ಹಾಡಿದ ಭಾವಗೀತೆಗಳು, ರಂಗಗೀತೆಗಳು ದೂರದರ್ಶನದಲ್ಲಿ ಪ್ರಸಾರವಾಗಿವೆ. ರಾಜ್ಯದ ಪ್ರಮುಖ ನಗರಗಳು ಮಾತ್ರವಲ್ಲ, ದೆಹಲಿ, ಮುಂಬೈ, ಬರೋಡ, ನೋಯ್ಡಾ, ಕಾಸರಗೋಡು ಮೊದಲಾದೆಡೆ ಸುಗಮ ಸಂಗೀತದ ಕಾರ್ಯಕ್ರಮಗಳನ್ನು ನೀಡಿರುವ ಕೀರ್ತಿ ಇವರದ್ದು.

ಭಕ್ತಿಗೀತೆ ಮತ್ತು ಪಠ್ಯಪುಸ್ತಕದ ಹಾಡುಗಳ ಧ್ವನಿಸುರುಳಿ ಮತ್ತು ಅನೇಕ ಹಾಡುಗಳ ಧ್ವನಿಸುರುಳಿಗಳು ಬಿಡುಗಡೆಗೊಂಡು, ಮುಕ್ತಕಗಳಿಗೆ, ಕವಿತೆಗಳಿಗೆ ಜೀವ ತುಂಬಿದ್ದರು.

ADVERTISEMENT

ದಕ್ಷಯಜ್ಞ, ಸಮುದ್ರಮಥನ, ಗಿರಿಜಾ ಕಲ್ಯಾಣ, ಲವಕುಶ, ನಾಗ ಮಹಿಮೆ, ಹೂಗಳ ರಾಣಿ, ಏಕತೆ, ಬಿತ್ತಿದ ಬೀಜ, ದಶಕನ್ಯೆಯರು, ರಾಮಜನನ, ಭರತನ ಭ್ರಾತೃ ಪ್ರೇಮ, ಶಾಂತಲೆ ಹೀಗೆ ಹಲವು ನಾಟಕ ಕೃತಿಗಳನ್ನು ರಚಿಸಿರುವ ಜತೆಗೆ ಹಲವಾರು ನಾಟಕಗಳಿಗೆ, ನೃತ್ಯ ರೂಪಕಗಳಿಗೆ ಹಾಡುಗಳ ರಚನೆಯನ್ನೂ ಮಾಡಿದ್ದರು.

ಶಿಕ್ಷಣ ಇಲಾಖೆಯ ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜ್ಞಾನಸಂಪತ್ತನ್ನು ಧಾರೆಯೆರೆದಿದ್ದರು. ಬ್ರಹ್ಮಾವರ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ, ಮಟಪಾಡಿ ಯಕ್ಷಗಾನ ಸಂಘ, ಗೆಳೆಯರ ಬಳಗ ಹಂಗ್ಳೂರು, ಲಾವಣ್ಯ ಬೈಂದೂರು, ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ, ಉಡುಪಿ ರಂಗಭೂಮಿ, ಉಡುಪಿಯ ರಥಬೀದಿ ಗೆಳೆಯರು ಮೊದಲಾದ ಸಂಘಟನೆಗಳಲ್ಲಿ ಸೇವೆ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿ ಕಾರ್ಯಕ್ರಮ ಆಯೋಜನೆ, ಅಜಪುರ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದರು.

ಮಾಬುಕಳದ ಚೇತನಾ ಪ್ರೌಢಶಾಲೆ, ಮಂಗಳೂರಿನ ಕೆನರಾ ಪ್ರೌಢಶಾಲೆ ಮತ್ತು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ 35 ವರ್ಷಗಳ ಕಾಲ ‌ಕಾರ್ಯ ನಿರ್ವಹಿಸಿ, ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ, ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕ ಪ್ರತಿಭಾ ಸ್ಪರ್ಧೆಯಲ್ಲಿ ಎರಡು ಬಾರಿ ಸಂಗೀತದಲ್ಲಿ ರಾಜ್ಯ
ಮಟ್ಟದಲ್ಲಿ ಬಹುಮಾನ, ಕರ್ನಾಟಕ ನಾಟಕ ಅಕಾಡೆಮಿಯ ರಂಗ ಭಾರತಿ
ನಾಟಕೋತ್ಸವಗಳಲ್ಲಿ ಹೂವಿನ ಹಡ ಗಲಿಯ ಸನ್ಮಾನ, ಮೂಡಬಿದಿರೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಶ್ರೀ’ ಬಿರುದು ಪ್ರದಾನ, ಕರ್ನಾಟಕ ಗಮಕ ಕಲಾ ಪರಿಷತ್ತಿನಿಂದ ಸನ್ಮಾನ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.