ADVERTISEMENT

ಸಂಭ್ರಮದ ಚೌತಿ: ವಿಘ್ನ ನಿವಾರಕನ ಸ್ಮರಣೆ

ಮನೆಗಳಲ್ಲಿ ಗಣಪತಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 13:22 IST
Last Updated 23 ಆಗಸ್ಟ್ 2020, 13:22 IST
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.   

ಉಡುಪಿ: ವಿಘ್ನನಿವಾರಕ ಗಣೇಶ ಹಬ್ಬ ಶನಿವಾರ ಸಂಭ್ರಮದಿಂದ ನೆರವೇರಿತು. ಸಾರ್ವಜನಿಕರು ಮನೆಗಳಲ್ಲಿ ಗಣಪತಿ ಕೂರಿಸಿ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಹಲವು ಸಂಘ ಸಂಸ್ಥೆಗಳು ವಿನಾಯಕನ ಮೂರ್ತಿಗಳನ್ನು ಕೂರಿಸಿದ್ದಾರೆ. ದೇವಸ್ಥಾನಗಳಲ್ಲೂ ಗಣಪನ ಪ್ರತಿಷ್ಠಾಪನೆ ಮಾಡಲಾಗಿದೆ.

ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.ಪರ್ಕಳದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ವಿಘ್ನ ನಿವಾರಕನ ಆರಾಧನೆ ನಡೆಯಿತು.ಅಲೆವೂರು ಗುಡ್ಡೆ ಅಂಗಡಿ ಗಣೇಶ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ 36ನೇ ವರ್ಷದ ಧನ್ವಂತರಿ ಗಣಪ ಗಮನ ಸೆಳೆಯುತ್ತಿದೆ.

ADVERTISEMENT

ಮಣಿಪಾಲದ ಸರಳೆಬೆಟ್ಟುವಿನಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.ಪೇಜಾವರ ‌ಮಠದ‌ ಮುಂಭಾಗದಲ್ಲಿ ಕೂರಿಸಿರುವ ಗಣಪತಿ ಆಕರ್ಷಣೀಯವಾಗಿದೆ.

ಕೃಷ್ಣಮಠದ ಬಡಗು ಮಾಳಿಗೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ತೀರ್ಥರ ಉಪಸ್ಥಿತಿಯಲ್ಲಿ ಗಣಯಾಗದ ಪೂರ್ಣಾಹುತಿ ನಡೆಯಿತು. ಈಶಪ್ರಿಯ ತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಮಹಾ ಪೂಜೆ ನೆರವೇರಿತು. ಮಠದ ಪುರೋಹಿತರಾದ ಲಕ್ಷ್ಮೀಶ ಆಚಾರ್ಯರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ನೀಲಾವರ ಗೋಶಾಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಿದರು. ವಿದ್ಯಾರ್ಥಿಗಳು ಬೈಹುಲ್ಲನ್ನು (ಭತ್ತದ ಒಣಹುಲ್ಲು) ಬಳಸಿಕೊಂಡು ರಚಿಸಿದ ಗಣಪತಿ ಹಾಗೂ ಅರಿಶಿನ ಹುಡಿಯ ಗಣಪತಿ ಗಮನ ಸೆಳೆಯಿತು.

ಮಹಾಪೂಜೆ ನೆರವೇರಿಸಿದ ಶ್ರೀಗಳು, ಕೊರೊನಾದಿಂದ ಮುಕ್ತಿ ದೊರೆತು ಲೋಕ ಕ್ಷೇಮವಾಗಲಿ, ಸಮಸ್ತ ಗೋಕುಲಕ್ಕೆ ಸುರಕ್ಷೆ ಸಮೃದ್ಧಿ ಸಿಗಲಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿಘ್ನವಾಗಿ ನೆರವೇರಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬುಧವಾರ ಗಣಪನ‌ ವಿಗ್ರಹ ವಿಸರ್ಜನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.