ADVERTISEMENT

ಮೀನುಗಾರಿಕಾ ದೋಣಿ ದುರಂತ: ಮುಂದುವರಿದ ಶೋಧ ಕಾರ್ಯಾಚರಣೆ

ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ನಡೆದ ಮೀನುಗಾರಿಕಾ ದೋಣಿ ದುರಂತ

ಕೆ.ಸಿ.ರಾಜೇಶ್‌
Published 16 ಜುಲೈ 2025, 4:55 IST
Last Updated 16 ಜುಲೈ 2025, 4:55 IST
ಅರಬ್ಬಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದಿರುವ ನಾಡದೋಣಿ
ಅರಬ್ಬಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದಿರುವ ನಾಡದೋಣಿ   

ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ  ದೋಣಿ ದುರಂತದಲ್ಲಿ  ನಾಪತ್ತೆಯಾಗಿರುವ ಮೀನುಗಾರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಸುರೇಶ್ ಖಾರ್ವಿ ಎಂಬುವವರ ನಾಡ ದೋಣಿಯಲ್ಲಿ ಜಗನ್ನಾಥ್ ಖಾರ್ವಿ, ರೋಹಿತ್ ಖಾರ್ವಿ ಹಾಗೂ ಸಂತೋಷ್ ಖಾರ್ವಿ  ಎಂಬುವವರು ಮೀನುಗಾರಿಕೆಗೆ ತೆರಳಿದ್ದು, ಸಂತೋಷ ಖಾರ್ವಿ ಅವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ದೋಣಿ ಮಗುಚುವ ಸಂದರ್ಭದಲ್ಲಿ ದೋಣಿಯಲ್ಲಿದ್ದ ಮೀನುಗಾರಿಕಾ ಬಲೆಗಳು ಮೀನುಗಾರರ ಮೇಲೆ ಬಿದ್ದಿವೆ. ನಾಪತ್ತೆಯಾಗಿರುವ ಮೀನುಗಾರರಿಗೆ ಹುಡುಕಾಟ ನಡೆಸಲಾಗುತ್ತಿದೆ. ಹವಾಮಾನ ವೈಪರೀತ್ಯದ ಬಗ್ಗೆ ಸಂಬಂಧಿಸಿದ ಇಲಾಖೆ ಸೋಮವಾರ ಸಂಜೆಯೇ ಎಚ್ಚರಿಕೆ ನೀಡಿದ್ದರೂ, ಈ ಮಾಹಿತಿ ಲಭ್ಯವಾಗದೆ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾಣೆಯಾದವರಲ್ಲಿ ಸುರೇಶ್ ಹಾಗೂ ಜಗನ್ನಾಥ್ ಅವರಿಗೆ ಮದುವೆಯಾಗಿದ್ದು, ಎಳೆಯ ಮಕ್ಕಳಿದ್ದಾರೆ ಎಂದು ಸ್ಥಳೀಯ ಮೀನುಗಾರ ಮುಖಂಡ ರಾಮಪ್ಪ ಖಾರ್ವಿ ತಿಳಿಸಿದ್ದಾರೆ

ಗಂಗೊಳ್ಳಿಗೆ‌‌ ಭೇಟಿ ನೀಡಿದ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು, ಸ್ಥಳೀಯ ಮೀನುಗಾರರು ಹಾಗೂ ಅಧಿಕಾರಿಗಳಿಂದ ದುರಂತ ಬಗ್ಗೆ ಮಾಹಿತಿ ಪಡೆದುಕೊಂಡರು.

ನಾಪತ್ತೆಯಾದ ಮೀನುಗಾರರು ಹುಡುಕಾಟಕ್ಕೆ ಸರ್ಕಾರ ಗಂಭೀರ ಪ್ರಯತ್ನ ನಡೆಸಲಿದೆ. ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರದಿಂದ ಗರಿಷ್ಠ ನೆರವು ಒದಗಿಸುವ ಕುರಿತು ಮೀನುಗಾರಿಕಾ ಸಚಿವರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

ಸಂಸದ ಭೇಟಿ: ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಸಂಜೆ ಗಂಗೊಳ್ಳಿಗೆ ಭೇಟಿ ನೀಡಿದರು.

ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಬಿಜೆಪಿ ಜಿಲ್ಲಾ ಘಟದಕ ಅಧ್ಯಕ್ಷ ನವೀನ್‌ಕುಮಾರ ಶೆಟ್ಟಿ ಕುತ್ಯಾರು, ಪ್ರಮುಖರಾದ ಕೃಷ್ಣಪ್ರಸಾದ್ ಅಡ್ಯಂತಾಯ, ವೆಂಕಟೇಶ್ ಕಿಣಿ, ಬಿ.ಎಸ್.ಸುರೇಶ್ ಶೆಟ್ಟಿ, ಅನಿತಾ ಆರ್.ಕೆ. ಮರವಂತೆ, ದೀಪಕ್ ಕುಮಾರ್ ಶೆಟ್ಟಿ ಬೈಂದೂರು ಸ್ಥಳಕ್ಕೆ ಭೇಟಿ ನೀಡಿದರು.

ಪರಿಹಾರದ ತುರ್ತು ಕ್ರಮಕ್ಕೆ ಆಗ್ರಹ: ಕಾಣೆಯಾಗಿರುವ ಮೀನುಗಾರರ ಪತ್ತೆಗೆ ತುರ್ತು ಕ್ರಮಕ್ಕೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಮೀನುಗಾರ ಕುಟುಂಬಗಳಿಗೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಡಿ ಅಗತ್ಯ ಪರಿಹಾರ ಒದಗಿಸಲು ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಜಿಲ್ಲೆಯ‌ ಶಾಸಕರ ಮೂಲಕ ಮೀನುಗಾರಿಕೆ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಇಲಾಖೆಯಿಂದ ಕುಟುಂಬಕ್ಕೆ ‌ತಲಾ ₹10 ಲಕ್ಷ ಪರಿಹಾರವನ್ನು ತುರ್ತಾಗಿ ಒದಗಿಸುವ ವ್ಯವಸ್ಥೆ ಆಗಿದೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿರುತ್ತದೆ. ಹೀಗಾಗಿ ನಾಡದೋಣಿ, ಟ್ರಾಲ್ ದೋಣಿ ಮೀನುಗಾರರು ವಿಶೇಷ ಎಚ್ಚರಿಕೆ ವಹಿಸಬೇಕು. ಜೀವಹಾನಿ ತಪ್ಪಿಸುವ ಲೈಫ್ ಜಾಕೆಟ್ ಬಳಸುವುದನ್ನು ಕಡ್ಡಾಯ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ನಾಪತ್ತೆಯಾದವರ ಕುಟುಂಬಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ, ಸಾಂತ್ವನದ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ್, ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಆಶಾ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಗಂಗೊಳ್ಳಿ ಮೀನುಗಾರಿಕಾ ದೋಣಿ ದುರಂತ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು
ಗಂಗೊಳ್ಳಿ ಮೀನುಗಾರಿಕಾ ದೋಣಿ ದುರಂತ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.