ADVERTISEMENT

ಉಡುಪಿ | ಕಸ ವಿಲೇವಾರಿ ತಾಣವಾದ ಹೆದ್ದಾರಿ; ಜಲಮೂಲ ಕಲುಷಿತ

ಹೆದ್ದಾರಿ, ಮಲ್ಪೆಯ ಕಡಲ ತೀರದಲ್ಲಿ ದುರ್ವಾಸನೆ; ಕಿರಿಕಿರಿ

ಬಾಲಚಂದ್ರ ಎಚ್.
Published 22 ಜನವರಿ 2024, 8:14 IST
Last Updated 22 ಜನವರಿ 2024, 8:14 IST
ರಾಷ್ಟ್ರೀಯ ಹೆದ್ದಾರಿ 66ರ ಹುಂಡೆ ಶೋರೂ ಬಳಿಯ ಸೇತುವೆ ಕೆಳಗೆ ಸಂಗ್ರಹವಾಗಿರುವ ತ್ಯಾಜ್ಯದ ರಾಶಿ
ರಾಷ್ಟ್ರೀಯ ಹೆದ್ದಾರಿ 66ರ ಹುಂಡೆ ಶೋರೂ ಬಳಿಯ ಸೇತುವೆ ಕೆಳಗೆ ಸಂಗ್ರಹವಾಗಿರುವ ತ್ಯಾಜ್ಯದ ರಾಶಿ   

ಉಡುಪಿ: ವೈಜ್ಞಾನಿಕವಾಗಿ ಹಸಿ ಹಾಗೂ ಒಣ ತ್ಯಾಜ್ಯ ವಿಲೇವಾರಿಯ ಮೂಲಕ ರಾಜ್ಯದ ಗಮನ ಸೆಳೆದಿರುವ ಉಡುಪಿ ತ್ಯಾಜ್ಯ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ನಗರದ ಹೊರವಲಯ, ನಿರ್ಜನ ಪ್ರದೇಶ, ಹೆದ್ದಾರಿಯ ಇಕ್ಕೆಲ ಹಾಗೂ ತೋಡುಗಳಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡಿದ್ದು ‘ಸ್ವಚ್ಛ ಉಡುಪಿ ಸುಂದರ ಉಡುಪಿ’ ಪರಿಕಲ್ಪನೆಯನ್ನು ಅಣಕಿಸುವಂತೆ ಭಾಸವಾಗುತ್ತಿದೆ.

ನಗರದ ಮೇಲೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ತ್ಯಾಜ್ಯ ವಿಲೇವಾರಿ ಕೇಂದ್ರವಾಗಿದ್ದು ಗಬ್ಬು ನಾರುತ್ತಿದೆ. ಉಡುಪಿ ತಾಲ್ಲೂಕಿನ ನಿಟ್ಟೂರಿನಿಂದ ಆರಂಭವಾಗಿ ಕಾಪು ತಾಲ್ಲೂಕಿನ ಕಟಪಾಡಿಯವರೆಗೆ ಚಾಚಿಕೊಂಡಿರುವ ಸುಮಾರು 15ಕಿ.ಮೀ ಹೆದ್ದಾರಿ ವ್ಯಾಪ್ತಿಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿಕೊಂಡಿದೆ.

ರಸ್ತೆ ಬದಿ ಸಂಚರಿಸಲು ಸಾಧ್ಯವಾಗದಷ್ಟು ದುರ್ವಾಸನೆ ತುಂಬಿಕೊಂಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಬದಿಯಲ್ಲಿ ವಾಸವಿರುವ ಸಾರ್ವಜನಿಕರ ಗೋಳು ಹೇಳತೀರದು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆಯ ಮುಂದೆ ತ್ಯಾಜ್ಯದ ರಾಶಿ ಸಂಗ್ರಹವಾಗುತ್ತಿದ್ದು ದುರ್ನಾತದಲ್ಲಿ ಬದುಕಬೇಕಾಗಿದೆ.

ADVERTISEMENT

ಕಟ್ಟಡದ ಅವಶೇಷಗಳು, ಹಳೆಯ ಬಟ್ಟೆ, ಚಪ್ಪಲಿಗಳು, ಹಾಳಾದ ಗೃಹ ಬಳಕೆ ವಸ್ತುಗಳನ್ನು ತಂದು ಹೆದ್ದಾರಿ ಬದಿಯೇ ಸುರಿಯಲಾಗುತ್ತಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಿಟ್ಟೂರಿನಿಂದ ಕಟಪಾಡಿವರೆಗೂ ಹಲವು ತೋಡುಗಳು ಹರಿಯುತ್ತಿದ್ದು ಪ್ರಮುಖವಾಗಿ ಉದ್ಯಾವರ ಹೊಳೆ, ಇಂದ್ರಾಣಿ ತೋಡು, ಹಲವು ಸಣ್ಣ ಕಾಲುವೆಗಳು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಬಾಟೆಲ್‌, ಪ್ಯಾಸ್ಟಿಕ್‌ ಚೀಲಗಳಿಂದ ತುಂಬಿಕೊಂಡಿದೆ.

ಹುಂಡೈ ಶೋರೂಂ ಸಮೀಪದ ಹೊಳೆಯ ಸೇತುವೆ ಕೆಳಗೆ ಟನ್‌ಗಟ್ಟಲೆ ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿರುವುದು ಸಮಸ್ಯೆಯ ಗಂಭೀರತೆ ತೋರಿಸುತ್ತಿದ್ದು ಜಲಚರಗಳಿಗೆ ಮಾರಕವಾಗಿದೆ. ಹೆದ್ದಾರಿಯಲ್ಲಿ ಸಾಗುವಾಗ ಕಣ್ಣಿಗೆ ರಾಚುವಂತೆ ಕಂಡರೂ ತ್ಯಾಜ್ಯವನ್ನು ವಿಲೇವಾರಿ ಮಾಡುವ ಗೋಜಿಗೆ ನಗರಸಭೆಯಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿಗಳಾಗಲಿ, ಹೆದ್ದಾರಿ ಇಲಾಖೆಯಾಗಲಿ ಹೋಗಿಲ್ಲ.

ಪ್ರತಿನಿತ್ಯವೂ ತ್ಯಾಜ್ಯ ರಾಶಿ ಹೆಚ್ಚಾಗುತ್ತಲೇ ಇದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಹೊಳೆ ಸೇತುವೆಯ ಸಮೀಪವೆ ಬೃಹತ್ ವಸ್ತು ಪ್ರದರ್ಶನ ನಡೆಯುತ್ತಿದ್ದು, ಪ್ರತಿನಿತ್ಯ ಸಂಗ್ರಹವಾಗುವ ಟನ್‌ಗಟ್ಟಲೆ ಹಸಿ ಹಾಗೂ ಒಣ ತ್ಯಾಜ್ಯವನ್ನು ಸೇತುವೆ ಬದಿಯಲ್ಲಿಯೇ ಸುರಿಯಲಾಗುತ್ತಿದ್ದು ವಿಲೇವಾರಿ ಮಾಡಿಲ್ಲ. ಪರಿಣಾಮ ತ್ಯಾಜ್ಯ ಸಂಪೂರ್ಣವಾಗಿ ಕೊಳೆತು ಇಡೀ ಪರಿಸರ ದುರ್ವಾಸನೆಯಿಂದ ಕೂಡಿದೆ.

ಬೀದಿ ನಾಯಿಗಳು, ಬಿಡಾಡಿ ದನಗಳು ಕೊಳೆತ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಕವರ್ ಸಹಿತವಾಗಿ ರಸ್ತೆಗೆ ಎಳೆದು ಬಿಸಾಡುತ್ತಿವೆ. ಪರಿಣಾಮ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಹೆದ್ದಾರಿ ಮಾತ್ರವಲ್ಲ; ಉಡುಪಿ ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತ್ಯಾಜ್ಯ ಸಮಸ್ಯೆ ಹೆಚ್ಚಾಗಿದೆ. ಅಂಬಲಪಾಡಿ, ಕಿನ್ನಿಮೂಲ್ಕಿ, ನೇಜಾರು, ಹೂಡೆ, ಮಲ್ಪೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಗಂಭೀರವಾಗಿದೆ. ನಿರ್ಜನ ಪ್ರದೇಶ ಹಾಗೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯದ ರಾಶಿ ಸಂಗ್ರಹವಾಗಿದ್ದು ಗ್ರಾಮಗಳ ಅಂದಗೆಡಿಸುತ್ತಿದೆ.

ಹೆದ್ದಾರಿ ಬದಿ ಸುರಿಯಲಾಗಿರುವ ತ್ಯಾಜ್ಯದ ರಾಶಿ
ತೋಡಿನಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ
ಹೆದ್ದಾರಿ ಬದಿ ಬಿದ್ದಿರುವ ತ್ಯಾಜ್ಯ
ಪ್ರತಿದಿನ ರಾತ್ರಿ ಹಾಗೂ ಬೆಳಗಿನ ಜಾವ ಮೂಟೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರುಪಯುಕ್ತ ವಸ್ತುಗಳನ್ನು ತಂದು ಹೆದ್ದಾರಿ ಬದಿ ಎಸೆದು ಹೋಗುತ್ತಾರೆ. ನಿತ್ಯವೂ ತ್ಯಾಜ್ಯ ಸುಟ್ಟುಹಾಕುವುದೇ ಕೆಲಸವಾಗಿದೆ
ವೀರೇಶ್‌ ಉದ್ಯಾವರ ನಿವಾಸಿ
ಮಲ್ಪೆ ಬೀಚ್‌ನ ಸೌಂದರ್ಯಕ್ಕೆ ಇಲ್ಲಿನ ತ್ಯಾಜ್ಯ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಚರಂಡಿಯ ಹೊಲಸು ಬೀಚ್‌ ಪರಿಸರದಲ್ಲಿ ತುಂಬಿದ್ದು ಗಬ್ಬು ವಾಸನೆ ಬೀರುತ್ತಿದೆ.
ಶ್ರೀನಿವಾಸ್‌ ಪ್ರವಾಸಿಗ
ಮಲ್ಪೆಗೆ ಬರುವ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿವೆ. ರಸ್ತೆಯ ಬದಿ ತ್ಯಾಜ್ಯದ ರಾಶಿ ಹರಡಿದ್ದು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ರಕ್ಷಾ ಪ್ರವಾಸಿಗರು

ತೋಡುಗಳು ಮಲಿನ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡು ಹಲವು ತೋಡುಗಳು ಹರಿಯುತ್ತಿದ್ದು ತ್ಯಾಜ್ಯವನ್ನು ತಂದು ಸುರಿಯುತ್ತಿರುವ ಪರಿಣಾಮ ಮಲಿನಗೊಂಡಿದೆ. ಮಳೆಗಾಲದಲ್ಲಿ ತೋಡುಗಳಲ್ಲಿ ನೀರು ಸರಾಗವಾಗಿ ಹರಿಯದೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತೋಡುಗಳಲ್ಲಿ ತುಂಬಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು.

‘ಶೀಘ್ರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ’

ರಸ್ತೆ ಬದಿ ಕಸ ಎಸೆಯುವವರಿಗೆ ನಗರಸಭೆ ದಂಡ ವಿಧಿಸುತ್ತಿದ್ದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ರಾತ್ರಿ ಹಾಗೂ ಬೆಳಗಿನ ಜಾವ ಹೆಚ್ಚಾಗಿ ಕಸ ತಂದು ಸುರಿಯಲಾಗುತ್ತಿರುವುದು ತಡೆಯಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬ್ಲಾಕ್‌ ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದೆ. ಹೆದ್ದಾರಿ ಬಳಿ ಬಿದ್ದಿರುವ ಕಸವನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಹೇಳಿದರು.

ಮಲ್ಪೆ ಬೀಚ್‌ ಅವ್ಯವಸ್ಥೆ

ರಾಜ್ಯದ ಪ್ರಸಿದ್ಧ ಪ್ರವಾಸಿತಾಣ ಸುಂದರ ಕಡಲ ತೀರ ಎಂಬ ಹೆಗ್ಗಳಿಕೆ ಪಡೆದಿರುವ ಮಲ್ಪೆ ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕಡಲ ಸೌಂದರ್ಯವನ್ನು ಸವಿಯುವ ಆಸೆಯಿಂದ ಬರುವ ಪ್ರವಾಸಿಗರು ಬೀಚ್‌ನಲ್ಲಿ ಇರುವ ಅವ್ಯವಸ್ಥೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಮಲ್ಪೆಯ ಮುಖ್ಯ ಬೀಚ್‌ನಿಂದ ಸೀವಾಕ್‌ವರೆಗೂ ಚಾಚಿಕೊಂಡಿರುವ ಸುಮಾರು 1ಕಿ.ಮೀ ಕಡಲ ತೀರದಲ್ಲಿ ಪ್ಲಾಸ್ಟಿಕ್‌ ಬಾಟೆಲ್‌ ಕವರ್ ಹಾಗೂ ಮದ್ಯದ ಬಾಟೆಲ್‌ಗಳು ಬಿದ್ದಿವೆ. ಬೀಚ್‌ ಕ್ಲೀನಿಂಗ್ ಅಭಿಯಾನದಲ್ಲಿ ಸಂಗ್ರಹಿಸುವ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇಮಾಡದೆ ಅಲ್ಲಲ್ಲಿ ಚೀಲಗಳಲ್ಲಿ ತುಂಬಿಡಲಾಗಿದ್ದು ಮಲ್ಪೆಯ ಸಹಜ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಬೀಚ್‌ ಸಮೀಪದ ಪ್ರದೇಶಗಳಿಂದ ಒಳಚರಂಡಿ ಮೂಲಕ ಹರಿದು ಬರುವ ತ್ಯಾಜ್ಯವನ್ನು ನೇರವಾಗಿ ಮಲ್ಪೆ ಬೀಚ್‌ಗೆ ಹರಿಯ ಬಿಡಲಾಗಿದ್ದು ಕಿನಾರೆಯ ವಾತಾವರಣ ಹಾಳಾಗಿದ್ದು ದುರ್ವಾಸನೆ ಆವರಿಸಿದೆ. ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ತೀರದಲ್ಲಿ ಅಲ್ಲಲ್ಲಿ ಹಾಕಲಾಗಿರುವ ಹಟ್‌ಗಳು ಮುರಿದು ಬಿದ್ದಿದ್ದು ದುರಸ್ತಿ ಮಾಡಿಲ್ಲ.

‘ಕಸ ಎಸೆಯುವವರಿಗೆ ದಂಡ ವಿಧಿಸಿ’

ದೂಳಿನ ಸಮಸ್ಯೆ ಒಂದೆಡೆಯಾದರೆ ಕಸದ ಸಮಸ್ಯೆ ನಿತ್ಯವೂ ಬಾಧಿಸುತ್ತಿದೆ. ರಾತ್ರಿ ಬೆಳಗಿನ ಜಾವ ನಿದ್ದೆಗೆಟ್ಟು ಕಸ ಎಸೆಯುವವರನ್ನು ಕಾಯಬೇಕಾದ ಪರಿಸ್ಥಿತಿ ಬಂದಿದೆ. ಸ್ಥಳೀಯ ಆಡಳಿತದಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿ ಕಸ ಎಸೆಯುವವರಿಗೆ ದುಬಾರಿ ದಂಡ ವಿಧಿಸಬೇಕು ಎಂದು ಹೆದ್ದಾರಿ ಬದಿ ನಿವಾಸಿ ಮಂಜುಳಾ ರಾವ್‌ ಹೇಳಿದರು.

‘ಕಸ ವಿಲೇವಾರಿಗೆ ಮುಂದಾಗಿಲ್ಲ’

ಹೆದ್ದಾರಿ ಬದಿ ತ್ಯಾಜ್ಯದ ರಾಶಿ ಬಿದ್ದು ಹಲವು ತಿಂಗಳು ಕಳೆದರೂ ಯಾರೂ ವಿಲೇವಾರಿಗೆ ಮುಂದಾಗಿಲ್ಲ. ನಗರಸಭೆ ಅಧಿಕಾರಿಗಳಿಗೆ ಹೇಳಿದರೆ ಸ್ಥಳೀಯ ಪಂಚಾಯಿತಿಗಳತ್ತ ಬೊಟ್ಟು ಮಾಡುತ್ತಾರೆ. ಪಂಚಾಯಿತಿಗಳು ಹೆದ್ದಾರಿ ಇಲಾಖೆ ತೋರಿಸಿ ನುಣುಚಿಕೊಳ್ಳುತ್ತಿವೆ ಎಂದು ಸ್ಥಳೀಯ ನಿವಾಸಿ ವಿದ್ಯಾಧರ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.