ADVERTISEMENT

ಉಡುಪಿ: ಮೇ.20ರಂದು ಕಾರ್ಮಿಕರ ಸಾರ್ವತ್ರಿಕ ಮುಷ್ಕರ

​ಪ್ರಜಾವಾಣಿ ವಾರ್ತೆ
Published 13 ಮೇ 2025, 13:12 IST
Last Updated 13 ಮೇ 2025, 13:12 IST
ಕೆ. ಮಹಾಂತೇಶ್‌
ಕೆ. ಮಹಾಂತೇಶ್‌   

ಉಡುಪಿ: ಕಾರ್ಮಿಕ ರಂಗದ ಸಮಸ್ಯೆಗಳಿಗೆ ಕಾರಣವಾಗಿರುವಂತಹ ನೀತಿಗಳನ್ನು ಕೇಂದ್ರ ಸರ್ಕಾರವು ಬದಲಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಇದೇ 20 ರಂದು ದೇಶವ್ಯಾಪಿ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ನಡೆಯಲಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಮಹಾಂತೇಶ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಶ್ರಮಜೀವಿಗಳ ಜೀವನೋಪಾಯಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕರವು ಕಾರ್ಮಿಕ ಸಂಹಿತೆಯಗಳನ್ನು ಜಾರಿಗೆ ತರುವ ಮೂಲಕ ದುಡಿಯುವ ಜನರ ಹಕ್ಕುಗಳನ್ನು ಹಾಗೂ ಸವಲತ್ತುಗಳನ್ನು ಕಸಿಯಲು ಹೊರಟಿದೆ ಎಂದರು.

ADVERTISEMENT

ಸಿಐಟಿಯು ರಾಜ್ಯ ಘಟಕ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ಸಮಿತಿ ವತಿಯಿಂದಲೂ ಅಂದು ಉಡುಪಿ, ಕುಂದಾಪುರ, ಬೈಂದೂರಿನಲ್ಲಿ ಪ್ರತಿಭಟನೆ ಮೆರವಣಿಗೆ ಹಾಗೂ ಸಭೆಗಳು ನಡೆಯಲಿವೆ. ಬ್ಯಾಂಕ್, ಎಲ್ಐಸಿ, ಅಂಚೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದು ವಿವಿರಿಸಿದರು.

ಅಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಕೆಎಸ್‌ಆರ್‌ಟಿಸಿ ಹಳೆ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಗೊಂಡು, ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಕೊನೆಗೊಳ್ಳಲಿದೆ. ನಂತರ ಸಭೆ ನಡೆಯಲಿದೆ ಎಂದರು. ಕುಂದಾಪುರದ ಶಾಸ್ತ್ರಿ ವೃತ್ತದಿಂದ ಆರಂಭಗೊಂಡು, ಬಸ್ ನಿಲ್ದಾಣವರೆಗೆ ಸಾಗಿ, ಶಾಸ್ತ್ರಿ ವೃತ್ತಕ್ಕೆ ವಾಪಸಾಗಿ ಸಭೆ ನಡೆಯಲಿದೆ ಎಂದರು.

ಜಿಲ್ಲಾ ಸಮಿತಿಯ ಪ್ರ‌‌‌ಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಮೇ 17 ರಂದು ಉಡುಪಿ, ಕುಂದಾಪುರ, ಬೈಂದೂರು ಭಾಗಗಳಲ್ಲಿ ಪಾದಯಾತ್ರೆಯ ಮೂಲಕ ಕರಪತ್ರವನ್ನು ಹಂಚಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಶೇಖರ್ ಬಂಗೇರಾ, ಕವಿರಾಜ್‌.ಎಸ್‌.ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.