ADVERTISEMENT

ಗಂಗೊಳ್ಳಿಯಿಂದ ಪರ್ತಗಾಳಿವರೆಗೆ...

ಶ್ರೀಗಳ ಭಕ್ತರ ಮನೆಗಳಲ್ಲಿ ಹರಿ ಭಜನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:26 IST
Last Updated 20 ಜುಲೈ 2021, 4:26 IST
ಸನ್ಯಾಸ ಸ್ವೀಕರಿಸುವ ಮೊದಲು ಪೂರ್ವಾಶ್ರಮದ ಕುಟುಂಬ ಸದಸ್ಯರೊಂದಿಗೆ ಶ್ರೀಗಳು ಇದ್ದ ಚಿತ್ರ (ಎಡದಿಂದ ಮೊದಲನೆಯವರು)
ಸನ್ಯಾಸ ಸ್ವೀಕರಿಸುವ ಮೊದಲು ಪೂರ್ವಾಶ್ರಮದ ಕುಟುಂಬ ಸದಸ್ಯರೊಂದಿಗೆ ಶ್ರೀಗಳು ಇದ್ದ ಚಿತ್ರ (ಎಡದಿಂದ ಮೊದಲನೆಯವರು)   

ಕುಂದಾಪುರ: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಗುರುಗಳಾಗಿ ಮಾರ್ಗದರ್ಶನ ಮಾಡುತ್ತಿದ್ದ ಗೋವಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹರಿಪಾದ ಸೇರಿರುವ ಸುದ್ದಿಯನ್ನು ಶಿಷ್ಯರಿಗೆ ಅರಗಿಸಿಗೊಳ್ಳಲು ಸಾಧ್ಯವಾಗುತ್ತಿಲ್ಲ. ವಿಷಯ ತಿಳಿದ ಶಿಷ್ಯರು ಮನೆಯಲ್ಲಿ ಗುರುವಿನ ಚಿತ್ರದ ಎದುರು ದೀಪ ಬೆಳಗಿ, ಹರಿ ಭಜನೆ ಮಾಡುತ್ತ ಶೋಕಾಚರಣೆ ಮಾಡುತ್ತಿದ್ದಾರೆ.

ಗಂಗೊಳ್ಳಿಯ ಮಲ್ಯರ ಮಠ ಎಂದು ಪ್ರಸಿದ್ಧವಾದ ವೆಂಕಟರಮಣ ದೇವಸ್ಥಾನದ ಪೂಜೆಗಳನ್ನು ನಿರ್ವಹಣೆ ಮಾಡುತ್ತಿದ್ದ ಸೇನಾಪುರ ಆಚಾರ್ಯ ಕುಟುಂಬದ ದಿ.ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ದಿ. ಶ್ರೀಮತಿ ಆಚಾರ್ಯ ಅವರ ಕುಟುಂಬದ 8 ಮಕ್ಕಳಲ್ಲಿ 2ನೇ ಪುತ್ರರಾಗಿ ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ರಾಘವೇಂದ್ರ ಆಚಾರ್ಯ. 1945ರಲ್ಲಿ ಜನಿಸಿದ್ದ ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು. ಗಂಗೊಳ್ಳಿಯಿಂದ ಕುಂದಾಪುರಕ್ಕೆ ದೋಣಿಯಲ್ಲಿ ಬಂದು ಹೋಗುತ್ತಿದ್ದ ಅವರು ಕಾಲೇಜು ದಿನಗಳಲ್ಲಿ ಗಂಗೊಳ್ಳಿ ಭಾಗದಲ್ಲಿ ಪತ್ರಿಕಾ ಉಪ ವಿತರಕರಾಗಿಯೂ ಕೆಲಸ ಮಾಡಿದ್ದರು. ಕಾರವಾರದಿಂದ ಗೋವಾಕ್ಕೆ ಸಾಗುವ 18 ಕಿ.ಮೀ ದೂರದಲ್ಲಿ ಕಾಣಕೋಣದ ಪರ್ತಗಾಳಿ ಜೀವತ್ತೋಮ ಮಠದ ಯತಿಗಳಾಗುವ ಭಾಗ್ಯ ರಾಘವೇಂದ್ರ ಆಚಾರ್ಯರಿಗೆ ಒಲಿದು ಬಂದಿತ್ತು. ಮಠದ ಪೀಠಾಧಿಪತಿ ಆದ ಮೇಲೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಪಾಯವನ್ನು ಹಾಕಿದ್ದರು. ದೇಶದ ವಿವಿಧ ಭಾಗಗಳಲ್ಲಿ ಇದ್ದ ಶಾಖಾ ಮಠಗಳನ್ನು ಪುನರುತ್ಥಾನಗೊಳಿಸುವ ಕೆಲಸ ಮಾಡಿದ್ದರು. ಚದುರಿ ಹೋಗಿದ್ದ ಗೌಡ ಸಾರಸ್ವತ ಬ್ರಾಹ್ಮಣರನ್ನು ಭಾವನಾತ್ಮಕವಾಗಿ ಸಂಘಟಿಸುವ ಕಾರ್ಯಕ್ಕೆ ಮಾರ್ಗದರ್ಶಕರಾಗಿದ್ದರು. ಉತ್ತರ ಕರ್ನಾಟಕದ ಮೀನುಗಾರ ಸಮುದಾಯದ ಶಿಷ್ಯವೃಂದವೂ ಸ್ವಾಮೀಜಿ ಮೇಲೆ ನಿಷ್ಠೆ ಹೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT