ADVERTISEMENT

ಉಡುಪಿ | ಗುಡ್ ಫ್ರೈಡೆ: ಚರ್ಚ್‌ಗಳಲ್ಲಿ ಧ್ಯಾನ, ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 2:30 IST
Last Updated 19 ಏಪ್ರಿಲ್ 2025, 2:30 IST
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು   

ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ಪ್ರದೀಪ್ ಕಾರ್ಡೊಜಾ, ಪೋಪ್ ಅವರ ಭಾರತೀಯ ರಾಯಭಾರಿಗಳ ಕಾರ್ಯದರ್ಶಿ ಆಲ್ಬರ್ಟೋ ನಪ್ಲಿತಾನೋ ಹಾಗೂ ಬೊಲಿವಿಯಾ ರಾಯಭಾರಿಗಳ ಕಾರ್ಯದರ್ಶಿ ಐವನ್ ಮಾರ್ಟಿಸ್, ಕಟಪಾಡಿ ಹೋಲಿ ಕ್ರಾಸ್ ಸಂಸ್ಥೆಯ ನಿರ್ದೇಶಕ ರೋನ್ಸನ್ ಡಿಸೋಜ ಇದ್ದರು.

ADVERTISEMENT

ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಗುಡ್ ಫ್ರೈಡೆ ಸಂದೇಶ ನೀಡಿ, ಶುಭ ಶುಕ್ರವಾರ ಯೇಸು ಕ್ರಿಸ್ತರ ತ್ಯಾಗದ ಮಹತ್ವವನ್ನು ಧ್ಯಾನಿಸುವ ಪವಿತ್ರ ದಿನ. ಈದಿನ ಯೇಸು ಮಾನವನ ಮೇಲಿರುವ ಅವನ ಅನಂತ ಪ್ರೀತಿಯನ್ನು ತೋರಿಸಲು ಶಿಲುಬೆಯ ಮೇಲೆ ತನ್ನ ಪ್ರಾಣವನ್ನೇ ಅರ್ಪಿಸಿದ ಶುಭದಿನ ಎಂದರು.

ಕ್ರಿಸ್ತರ ತ್ಯಾಗ ನಮ್ಮ ಜೀವನದಲ್ಲಿ ದಾರಿತೋರಿಸುವ ಬೆಳಕಾಗಲಿ. ಪ್ರೀತಿ, ಕ್ಷಮೆ, ಪರೋಪಕಾರದ ಮೂಲಕ ನವ ಸಮಾಜವನ್ನು ಕಟ್ಟೋಣ ಎಂದು ಹೇಳಿದರು.

ಚರ್ಚ್‌ಗಳಲ್ಲಿ ಕ್ರೈಸ್ತರು ಉಪವಾಸ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರು. ಕೆಲವು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಗೇರಿಸುವ ಘಟನಾವಳಿಗಳನ್ನು ಪ್ರಸ್ತುತ ಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.

ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಆಯಾ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರ ಶುಕ್ರವಾರದ ವಿಧಿ ವಿಧಾನಗಳು ಜರುಗಿದವು. ಉಡುಪಿ ಶೋಕಮಾತಾ ಚರ್ಚಿನಲ್ಲಿ ಧರ್ಮಗುರು ಚಾರ್ಲ್ಸ್ ಮಿನೇಜಸ್, ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಡೆನಿಸ್ ಡೆಸಾ, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಲೆಸ್ಲಿ ಡಿಸೋಜಾ, ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಆಲ್ಬನ್ ಡಿಸೋಜ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.