ಉಡುಪಿ: ಗರುಡ ಗ್ಯಾಂಗ್‌ನ ಸಕ್ರಿಯ ಸದಸ್ಯ ಕಾರ್ಕಳದ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ವಿರುದ್ದ ಹೊರಡಿಸಿದ್ದ ಗೂಂಡಾ ಕಾಯ್ದೆಯಡಿ ಬಂಧನ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ನೆರೆಯ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಬೀರ್‌ನ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲು ಕಾರ್ಕಳ ನಗರ ಠಾಣೆಯ ಇನ್‌ಸ್ಪೆಕ್ಟರ್ ಮುಖಾಂತರ ಬಂದ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಯವರು ಜುಲೈ 10ರಂದು ಬಂಧನ ಆದೇಶ ಹೊರಡಿಸಿದ್ದರು. ಬಳಿಕ ಆರೋಪಿಯನ್ನು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
ಬಂಧನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದು, ಆರೋಪಿಗೆ 1 ವರ್ಷದವರೆಗೆ ಬಂಧನ ಆದೇಶ ನೀಡಿದೆ.
ಆರೋಪಿಯ ವಿರುದ್ಧ 2005ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಎರಡು ಪ್ರಕರಣಗಳಲ್ಲಿ ಸಜೆಯಾಗಿದೆ. 8 ಪ್ರಕರಣಗಳಲ್ಲಿ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿ ನುಡಿದ ಕಾರಣ ಖುಲಾಸೆಗೊಂಡಿದ್ದ. ಮೂರು ಪ್ರಕರಣಗಳು ರಾಜಿಯಲ್ಲಿ ಮುಕ್ತಾಯವಾಗಿವೆ. ಎರಡು ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿದ್ದು, ಇನ್ನುಳಿದ ಎರಡು ಪ್ರಕರಣಗಳು ತನಿಖೆಯಲ್ಲಿವೆ.
ಸಜೆಯಾದ ಪ್ರಕರಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯಲ್ಲಿ 2012ನೇ ಸಾಲಿನಲ್ಲಿ ವರದಿಯಾದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿರುವುದೂ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.