ADVERTISEMENT

‘ಖಾಸಗಿ ಸಾಕು; ಸರ್ಕಾರಿ ಶಾಲೆ ಬೇಕು’: ಬದಲಾಯ್ತು ಉಡುಪಿ ಪೋಷಕರ ಮನಸ್ಥಿತಿ

ಕೊರೊನಾದಿಂದ ಬದಲಾದ ಪೋಷಕರ ಮನಸ್ಥಿತಿ; 1,857 ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶ

ಬಾಲಚಂದ್ರ ಎಚ್.
Published 12 ಸೆಪ್ಟೆಂಬರ್ 2020, 20:15 IST
Last Updated 12 ಸೆಪ್ಟೆಂಬರ್ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಪೋಷಕರ ಮನಸ್ಥಿತಿ ಕೊರೊನಾ ಕಾರಣದಿಂದ ಬದಲಾಗುತ್ತಿದೆ. ಕಳೆದ ವರ್ಷ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದ ಕೆಲವು ಪೋಷಕರು, ಈ ವರ್ಷ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಖಾಸಗಿ ಶಾಲೆಯ ವ್ಯಾಮೋಹ ಕಳಚಿ ಸರ್ಕಾರಿ ಶಾಲೆಗಳತ್ತ ಆಕರ್ಷಣೆ ಹೆಚ್ಚುತ್ತಿರುವುದು ಶಿಕ್ಷಣ ವ್ಯವಸ್ಥೆಯ ಕ್ರಾಂತಿಕಾರಕ ಬದಲಾವಣೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

1,857 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ:ಜಿಲ್ಲೆಯಲ್ಲಿ2020–21ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ 1,857 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಬ್ರಹ್ಮಾವರ, ಬೈಂದೂರು, ಕಾರ್ಕಳ, ಕುಂದಾಪುರ ಹಾಗೂ ಉಡುಪಿ ತಾಲ್ಲೂಕುಗಳ 243 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1,587 ಮಕ್ಕಳು ದಾಖಲಾಗಿದ್ದಾರೆ. 37 ಪ್ರೌಢಶಾಲೆಗಳಲ್ಲಿ 270 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ದಾಖಲಾತಿ ಹೆಚ್ಚಳಕ್ಕೆ ಕಾರಣ:ಸರ್ಕಾರಿ ಶಾಲೆಗಳಲ್ಲಿ ದಿಢೀರ್ ದಾಖಲಾತಿ ಹೆಚ್ಚಾಗಲು ಕೋವಿಡ್‌ ಸೃಷ್ಟಿಸಿರುವ ಅವಾಂತರಗಳು ಕಾರಣ. ಸ್ವಉದ್ಯಮ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿದ್ದ ಹೆಚ್ಚಿನವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಿರ್ವಹಣೆಯೂ ಸವಾಲಾಗಿರುವ ಕಾಲದಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವುದು ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ.

ADVERTISEMENT

ಆರ್ಥಿಕ ಸಂಕಷ್ಟದ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ಕೊಡಿಸದೆ ಇರುವಂತೆಯೂ ಇಲ್ಲ. ದುಬಾರಿ ಶುಲ್ಕ, ಶಾಲಾ ವಾಹನಗಳ ಬಾಡಿಗೆ, ಪುಸ್ತಕಗಳ ಖರೀದಿಗೆ ಸಾವಿರಾರು ರೂಪಾಯಿ ವ್ಯಯಿಸುವ ಬದಲು, ಉಚಿತ ಶಿಕ್ಷಣ ಸಿಗುವ ಸರ್ಕಾರಿ ಶಾಲೆಗಳನ್ನು ಪೋಷಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಣ ತಜ್ಞರಾದ ಮಹಾಬಲೇಶ್ವರ ರಾವ್‌.

ಈ ಬದಲಾವಣೆಗೆ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಸಿಗುತ್ತಿದೆ ಎಂದರ್ಥವಲ್ಲ. ಕೊರೊನಾ ಸೋಂಕು ಸೃಷ್ಟಿಸಿರುವ ತಾತ್ಕಾಲಿಕ ಸ್ಥಿತ್ಯಂತರದಂತೆಮೇಲ್ನೋಟಕ್ಕೆ ಕಾಣುತ್ತಿದೆ. ಸೋಂಕು ತಗ್ಗಿದ ಬಳಿಕ ಶೇ 50ರಷ್ಟು ಮಕ್ಕಳು ಮತ್ತೆ ಖಾಸಗಿ ಶಾಲೆಗಳಿಗೆ ಮರಳುವ ಸಾದ್ಯತೆಗಳು ಇವೆ ಎನ್ನುತ್ತಾರೆ ಅವರು.

ಬದಲಾದ ಮನಸ್ಥಿತಿ:ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹೊತ್ತಿನಲ್ಲಿ ಮಕ್ಕಳು ದೂರದ ಖಾಸಗಿ ಶಾಲೆಗಳಲ್ಲಿ ಓದುವ ಬದಲು ಮನೆಯ ಹತ್ತಿರದ ಸರ್ಕಾರಿ ಶಾಲೆಗಳಲ್ಲಿ ಓದಲಿ ಎಂಬ ಅಭದ್ರತೆಯ ಮನಸ್ಥಿತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕಾರಣ ಎಂಬುದು ಪೋಷಕ ರಾಘವೇಂದ್ರ ಅವರ ಅಭಿಪ್ರಾಯ.

ಖಾಸಗಿ ಶಾಲೆಗಳಲ್ಲಿ ಸದ್ಯ ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ. ತರಗತಿಗಳು ಆರಂಭವಾಗದಿದ್ದರೂ ಪೋಷಕರಿಂದ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ತರಗತಿಗಳೇ ನಡೆಯದಿರುವಾಗ ಶುಲ್ಕ ಪಾವತಿಸುವುದು ಏಕೆ. ಅದರ ಬದಲು ಈ ವರ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಲಿ ಎನ್ನುತ್ತಾರೆ ಮತ್ತೊಬ್ಬ ಪೋಷಕರಾದ ರತ್ನಾಕರ್‌.

‘ವಿದ್ಯಾಗಮದ ಯಶಸ್ಸು’

ವಿದ್ಯಾಗಮ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಮನೆ ಬಾಗಿಲಿಗೆ ಶಿಕ್ಷಕರು ಹೋಗಿ ಪಾಠ ಹೇಳುತ್ತಿದ್ದಾರೆ.ಕೋವಿಡ್‌ ಕಾಲದಲ್ಲಿಯೂ ಮಕ್ಕಳಿಗೆ ಮುಖಾಮುಖಿ ಶಿಕ್ಷಣ ನೀಡುವುದನ್ನು ಕಂಡು ಖಾಸಗಿ ಶಾಲೆಯ ಮಕ್ಕಳ ಪೋಷಕರು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸೆಪ್ಟೆಂಬರ್ ಅಂತ್ಯದವರೆಗೂ ದಾಖಲಾತಿ ನಡೆಯಲಿದ್ದು, ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲಾಗುವುದು. ಸುಧಾರಿತ ಶಿಕ್ಷಣ ಕ್ರಮ ಹಾಗೂ ವಿಭಿನ್ನ ಬೋಧನಾ ಸೌಲಭ್ಯ ನೀಡುವ ಮೂಲಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೇ ಉಳಿಯುವಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು’ ಎನ್ನುತ್ತಾರೆ ಡಿಡಿಪಿಐ ಶೇಷಶಯನ ಕಾರಿಂಜ.

‘ಸುವರ್ಣ ಅವಕಾಶ: ಸದುಪಯೋಗಪಡಿಸಿಕೊಳ್ಳಿ’

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿರುವುದು ಸರ್ಕಾರಕ್ಕೆ ಸಿಕ್ಕಿರುವ ಸುವರ್ಣ ಅವಕಾಶ. ಈ ಅವಧಿಯಲ್ಲಿ ಶಿಕ್ಷಕರ ಹುದ್ದೆ ಭರ್ತಿ, ಶಾಲೆಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು, ಆಕರ್ಷಕವಾಗಿ ಕೊಠಡಿಗಳ ವಿನ್ಯಾಸ, ಖಾಸಗಿ ಶಾಲೆ ಮೀರಿಸುವಂತಹ ಬೋಧನಾ ಸೌಲಭ್ಯ ಒದಗಿಸಿದರೆ ಸರ್ಕಾರಿ ಶಾಲೆಗಳು ಸಬಲಗೊಳ್ಳುತ್ತವೆ. ಸರ್ಕಾರ ಕೈಕಟ್ಟಿ ಕುಳಿತರೆ, ಕೊರೊನಾ ಸೋಂಕು ತಗ್ಗಿ ಆರ್ಥಿಕತೆ ಸುಧಾರಿಸಿದ ಬಳಿಕ ಪೋಷಕರು ಮತ್ತೆ ಮಕ್ಕಳನ್ನು ಸರ್ಕಾರಿ ಶಾಲೆಗಳನ್ನು ಬಿಡಿಸಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ ಎಂದು ಶಿಕ್ಷಣ ತಜ್ಞಮಹಾಬಲೇಶ್ವರ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.