ಕುಂದಾಪುರ: ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಮೂಲಸೌಕರ್ಯ, ಶಿಕ್ಷಕರ ಕೊರತೆ ಕಾರಣವಾಗಿದ್ದು, ಇದಕ್ಕೆ ಆಳುವ ಸರ್ಕಾರಗಳೇ ನೇರ ಹೊಣೆ’ ಎಂದು ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಹೇಳಿದರು.
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕ, ಶಿವಪ್ರಸಾದ್ ಗ್ರ್ಯಾಂಡ್ ಹೋಟೆಲ್ ಸಹಯೋಗದಲ್ಲಿ ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಎಸ್‌ಡಿಎಂಸಿ ವೇದಿಕೆಯು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜೊತೆಗೆ ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದೆ. ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಹಳೆವಿದ್ಯಾರ್ಥಿಗಳ ಒಗ್ಗೂಡುವಿಕೆಯೂ ಅಗತ್ಯವಾಗಿದ್ದು, ಕಾನೂನುಬದ್ಧವಾಗಿ ಹಳೆವಿದ್ಯಾರ್ಥಿ ಸಂಘ ರಚಿಸಿ ಅದಕ್ಕೆ ಮುಖ್ಯಶಿಕ್ಷಕರನ್ನು ಕಾರ್ಯದರ್ಶಿಯಾಗಿ ನೇಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕದ ಮಹಾಪೋಷಕ ಶಂಕರ್ ಐತಾಳ್ ಅವರು, ಗ್ರಾಮೀಣ ಭಾಗದ ಅಮಾಸೆಬೈಲು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದರು.
ವೇದಿಕೆಯ ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ ಮಾತನಾಡಿ, ವೇದಿಕೆಯು ಕಟ್ಟಕಡೆಯ ಮಗು ಗುಣಮಟ್ಟದ ಶಿಕ್ಷಣ ಪಡೆಯಲು ಇಲಾಖೆಗಳ ಮಾರ್ಗದರ್ಶನ, ಸಹಯೋಗದಲ್ಲಿ ಸರ್ಕಾರಿ ಶಾಲೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ, ನಗದು ಬಹುಮಾನ ವಿತರಿಸಲಾಯಿತು. ಪುರಸಭೆ ಸದಸ್ಯ ಅಬು ಮೊಹಮ್ಮದ್ ಮುಜಾವರ್, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಕರ್ನಾಟಕ ರಾಜ್ಯ ಸಂಚಾಲಕ ಮೊಯಿದಿನ್ ಕುಟ್ಟಿ, ಸಂಘಟನೆಯ ಪುರಸಭೆ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್ ಭಾಗವಹಿಸಿದ್ದರು. ವೇದಿಕೆಯ ಜಿಲ್ಲಾ ಕಾರ್ಯದರ್ಶಿ ದೀಪಾ ಜಪ್ತಿ ನಿರೂಪಿಸಿದರು. ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರಮೋದಾ ಕುಶಲ್ ಶೆಟ್ಟಿ ಸ್ವಾಗತಿಸಿದರು. ಪುರಸಭೆ ಘಟಕದ ಕಾರ್ಯದರ್ಶಿ ವರದಾ ಸುಧಾಕರ್ ಆಚಾರ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.