ADVERTISEMENT

ಕುಂದಾಪುರ | ಹೈನು ಉತ್ಪನ್ನಗಳ ಜಿಎಸ್‌ಟಿ: ರೈತ ಸಂಘ ಆಕ್ರೋಶ

ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 4:52 IST
Last Updated 22 ಜುಲೈ 2022, 4:52 IST
ಕೆ.ವಿಕಾಸ್ ಹೆಗ್ಡೆ
ಕೆ.ವಿಕಾಸ್ ಹೆಗ್ಡೆ   

ಕುಂದಾಪುರ: ‘ಹಾಲಿನ ಉತ್ಪನ್ನಗಳ ಮೇಲೆ ಶೇ 5 ಜಿಎಸ್‌ಟಿ ವಿಧಿಸಿರುವುದರಿಂದ ರೈತರು ಹಾಗೂ ಹೈನುಗಾರರಿಗೆ ಯಾವುದೇ ಲಾಭ ದೊರೆಯುದಿಲ್ಲ. ಇದರಿಂದ ಕೆಎಂಎಫ್‌ನಂತಹ ಸಂಸ್ಥೆ ಹಾಗೂ ಸರ್ಕಾರಗಳ ಬೊಕ್ಕಸ ತುಂಬುತ್ತದೆ’ ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ವಿಧಿಸಿರುವ ಜಿಎಸ್‌ಟಿಯನ್ನೇ ಆಧಾರವಾಗಿರಿಸಿಕೊಂಡು ಕೆಎಂಎಫ್‌ನವರು ನಂದಿನಿ ಮೊಸರು, ಮಜ್ಜಿಗೆ, ಲಸ್ಸಿಗಳ ಬೆಲೆ ಏರಿಸಿದ್ದಾರೆ. ತೆರಿಗೆ ಏರಿಕೆಯಿಂದ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ರೈತರಿಗೆ ನೀಡುವ ಉದ್ದೇಶ ಸರ್ಕಾರಕ್ಕೂ ಅಥವಾ ಕೆಎಂಎಫ್ ಸಂಸ್ಥೆಗೂ ಇಲ್ಲದೆ ಇರುವುದು ನಮ್ಮ ವ್ಯವಸ್ಥೆಯ ದುರಂತವಾಗಿದೆ.

ಹೈನುಗಾರಿಕೆಗೆ ಅಗತ್ಯವಾಗಿರುವ ಮೇವು, ಪಶು, ಆಹಾರ ಮುಂತಾದ ಅಗತ್ಯ ವಸ್ತುಗಳ ದರವು ದಿನದಿಂದ ದಿನಕ್ಕೆ ಏರುತ್ತಿದೆ. ಮಾರುಕಟ್ಟೆ ಬೆಲೆಗಿಂತ ನಿರ್ವಹಣಾ ವೆಚ್ಚವೇ ಅಧಿಕವಾಗುತ್ತಿರುವುದರಿಂದ ಹೈನುಗಾರಿಕೆಯೇ ಬೇಡ ಎಂದು ರೈತಾಪಿ ವರ್ಗ ಈ ಕ್ಷೇತ್ರದಿಂದ ದೂರಾಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ರೈತರಿಗೆ ಬೆಂಬಲವಾಗಿ ನಿಲ್ಲಬೇಕಾದ ಸರ್ಕಾರ, ತೆರಿಗೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿರುವುದು ಖಂಡನೀಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಜಿಎಸ್‌ಟಿ ವಿಧಿಸುವ ಬದಲು, ಹಾಲಿನ ಖರೀದಿ ದರವನ್ನು ಹೆಚ್ಚಿಸುವುದರ ಮೂಲಕ ಸರ್ಕಾರವು ಹೈನುಗಾರರಿಗೆ ಸಹಾಯ ಮಾಡಬೇಕು, ಜಿಎಸ್‌ಟಿಯಿಂದ ಸಂಗ್ರಹವಾಗುವ ಹೆಚ್ಚುವರಿ ತೆರಿಗೆ ಹಣವನ್ನು ಹೈನುಗಾರರಿಗೆ ನೆರವಿನ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.