ADVERTISEMENT

ನನ್ನ ಜೀವನ ತೆರೆದ ಪುಸ್ತಕದಂತಿದೆ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 4:57 IST
Last Updated 31 ಜುಲೈ 2024, 4:57 IST
<div class="paragraphs"><p>ಶಾಸಕ ಗುರ್ಮೆ ಸುರೇಶ್ ಶೆಟ್ಟಿ (ಸಂಗ್ರಹ ಚಿತ್ರ)&nbsp;</p></div>

ಶಾಸಕ ಗುರ್ಮೆ ಸುರೇಶ್ ಶೆಟ್ಟಿ (ಸಂಗ್ರಹ ಚಿತ್ರ) 

   

ಕಾಪು (ಪಡುಬಿದ್ರಿ): ಕಾಪು ಕ್ಷೇತ್ರದಲ್ಲಿ ವಿನಯಕುಮಾರ್ ಸೊರಕೆ ಅವರು ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜನಾದೇಶ ಅವರ ಪರವಾಗಿ ಇಲ್ಲದೇ ಸೋತು ಹತಾಶೆಯಿಂದ ನನ್ನ ಮೇಲೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತಿಲ್ಲ ಎಂದು ಸುಳ್ಳು ಆಪಾದನೆಯನ್ನು ಹೊರಿಸಿದ್ದಾರೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ವಿನಯಕುಮಾರ್ ಸೊರಕೆ ಅವರ ಆರೋಪಕ್ಕೆ ಕಾಪುವಿನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.

ADVERTISEMENT

ಶಾಸಕನಾದ ನನ್ನ ಮೇಲೆ ವ್ಯವಹಾರದ ಉದ್ದೇಶದಿಂದ ಕೆಲಸ ಮಾಡುತ್ತಿರುವುದಾಗಿ ಆಪಾದನೆಯನ್ನು ಮಾಡಿದ್ದಾರೆ. ನಾನು 40 ವರ್ಷಗಳಿಂದ ನ್ಯಾಯೋಚಿತವಾಗಿ ವಿವಿಧ ಕಡೆಗಳಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದೇನೆ. ಶಾಸಕನಾಗುವ ಮೊದಲೇ ವ್ಯವಹಾರದ ಆದಾಯದ ಸ್ವಲ್ಪ ಭಾಗವನ್ನು ಸಮಾಜದ ಕಟ್ಟಕಡೆಯ, ನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ವಿನಿಯೋಗಿಸುತ್ತಿದ್ದೆ ಎಂದರು.

ನಾನು ಶಾಸಕನಾದ ಬಳಿಕ ಪಕ್ಷ, ಜಾತಿ, ಧರ್ಮ, ಭೇದ ಮಾಡದೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಸಾರ್ವಜನಿಕ ಹಾಗೂ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ ಎಂದು ಹೇಳಿದರು.

ಕಾಪು ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ. ಇದನ್ನು ಸಹಿಸದೆ ಸುಳ್ಳನ್ನೇ ತನ್ನ ಮನೆ ದೇವರು ಮಾಡಿಕೊಂಡಿರುವ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಹತಾಶೆ ಮನೋಭಾವದಿಂದ, ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಇಲ್ಲ ಸಲ್ಲದ ಆರೋಪ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಸೊರಕೆ ಅವರು ಉದ್ದೇಶಪೂರ್ವಕವಾಗಿ ಸಚಿವರುಗಳಿಗೆ ಒತ್ತಡ ಹೇರಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದಂತೆ ತಡೆಯೊಡ್ಡುತ್ತಿದ್ದಾರೆ. ಅಲ್ಲದೆ ಅನುದಾನವಿಲ್ಲವೆಂಬ ನಮ್ಮ ಹೇಳಿಕೆಗೆ ಟೀಕಿಸುವ ಸಣ್ಣತನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದು ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಬಾರಿ ಹೇಳುತ್ತಾ ಜನರನ್ನು ಭಾವನಾತ್ಮಕವಾಗಿ ವಂಚಿಸುತ್ತಾ ಮತ ಪಡೆಯಲು ವಿಫಲ ಪ್ರಯತ್ನ ಮಾಡಿ ಇನ್ನೂ ರಾಜಕೀಯದಲ್ಲಿ ಇರುವುದು ಸೊರಕೆಯವರ ಸುಳ್ಳಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಲೇವಡಿ ಮಾಡಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹೊಸ ಯೋಜನೆಗಳು ಇಲ್ಲ. ಯಾರಿಗೂ ಅನುದಾನ ದೊರಕುತ್ತಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ. ಈ ಬಗ್ಗೆ ಸೊರಕೆ ಅವರು ವಸ್ತುಸ್ಥಿತಿ ಅರ್ಥಮಾಡಿಕೊಂಡು ಆರೋಪಿಸಬೇಕು ಎಂದು ನುಡಿದರು.

ಪ್ರಸ್ತಾವನೆ ₹288.82 ಕೋಟಿ, ಬಂದದ್ದು ₹18.55 ಕೋಟಿ: 

ಶಾಸಕನಾಗಿ ಕಳೆದ ಹದಿನಾಲ್ಕು ತಿಂಗಳಲ್ಲಿ ₹288.82 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈವರೆಗೆ ಸರ್ಕಾರ ಕೇವಲ ₹18.55 ಕೋಟಿ ಅನುದಾನವನ್ನು ಮಾತ್ರ ನೀಡಿದೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2023–24, 2024–25ರ ಅವಧಿಯಲ್ಲಿ ಈವರೆಗೆ ನದಿದಂಡೆ ಸಂರಕ್ಷಣೆ, ಗ್ರಾಮೀಣ ರಸ್ತೆ, ಕಡಲ್ಕೊರೆತ, ಅಲ್ಪಸಂಖ್ಯಾತರ ಕಾಲೊನಿ ರಸ್ತೆ, ಲೋಕೋಪಯೋಗಿ, ಪರಿಶಿಷ್ಟ ಜಾತಿ ಸಮುದಾಯ ರಸ್ತೆ, ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ, ಪ್ರಾರ್ಥನಾ ಮಂದಿರ, ಕೆರೆಗಳ ಅಭಿವೃದ್ಧಿ, ಮೀನುಗಾರಿಕಾ ಕೊಂಡಿ ರಸ್ತೆ, ನದಿಕೊರೆತ, ಕಿಂಡಿ ಅಣೆಕಟ್ಟು, ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಹಿತ ಸಚಿವರುಗಳಿಗೆ ಮನವಿ ಸಹಿತ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.

ಕಾಪು ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳನ್ನು ಭೇಟಿಯಾಗಿ, ಜಾಗ ಗುರುತಿಸಿ, ವಿಂಗಡಿಸುವಂತೆ ಮನವಿ ಮಾಡಿದ್ದೇನೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ, ಕಂದಾಯ ಮತ್ತು ಅರಣ್ಯ ಸಚಿವರಿಗೂ ಮನವಿ ಮಾಡಿದ್ದು ಅವರು ಜಾಗ ನೀಡುವುದಕ್ಕಾಗಿ ಜಂಟಿ ಸರ್ವೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹಾಗಾಗಿ ನಿವೇಶನ ಹಂಚಿಕೆ ವಿಳಂಬಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆಪಾದಿಸಿದರು.

ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಕಾಪು ಕ್ಷೇತ್ರದ ಹೆಜಮಾಡಿ ತಾಲ್ಲೂಕು ಕ್ರೀಡಾಂಗಣದಲ್ಲಿ ಪುಟ್ಬಾಲ್, ಒಳಾಂಗಣ ಕ್ರೀಡಾಂಗಣ, ಈಜು ಕೊಳ ನಿರ್ಮಾಣ ಬಗ್ಗೆ ₹25.20 ಕೋಟಿ  ಮಂಜೂರಾಗಿದೆ. ಅದರ ಜತೆಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮುಂದುವರಿದಿದೆ ಎಂದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ನನ್ನ ಅವಧಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹2500 ಕೋಟಿ  ಅನುದಾನ ದೊರಕಿಸಿಕೊಟ್ಟಿದ್ದೇನೆ. ಇದರಲ್ಲಿ 25 ಶಾಲೆಗಳಲ್ಲಿ ವಿವೇಕ ಕೊಠಡಿ, ರಸ್ತೆ ಸಂಪರ್ಕ ಸಹಿತ ಹಲವು ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಅಲ್ಲದೆ ನನೆಗುದಿಗೆ ಬಿದ್ದಿದ್ದ ಹೆಜಮಾಡಿ ಬಂದರು ನಿರ್ಮಾಣ ಬಹು ದೊಡ್ಡ ಯೋಜನೆ ಎಂದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಪಕ್ಷದ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಅನಿಲ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.