ADVERTISEMENT

ಸರ್ವ ವಿಚಾರದಲ್ಲೂ ಜೇಷ್ಠತೆ ಪಡೆದ ಯತಿಗಳು

ಗುರುವಂದನಾ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ಹೊಗಳಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 16:23 IST
Last Updated 17 ಜೂನ್ 2019, 16:23 IST
ಅದಮಾರು ಹಿರಿಯ ಯತಿಗಳ ಪ್ರವಚನಗಳನ್ನೊಳಗೊಂಡ ಕೃತಿಗಳು, ಸಾಧನೆಗಳ ಚಿತ್ರಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.‌
ಅದಮಾರು ಹಿರಿಯ ಯತಿಗಳ ಪ್ರವಚನಗಳನ್ನೊಳಗೊಂಡ ಕೃತಿಗಳು, ಸಾಧನೆಗಳ ಚಿತ್ರಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.‌   

ಉಡುಪಿ: ಮಧ್ವಾಚಾರ್ಯರಿಗಿದ್ದ ಸಾಮರ್ಥ್ಯವನ್ನು ಅದಮಾರು ಮಠದ ವಿಶ್ವಪ್ರಿಯ ತೀರ್ಥರಲ್ಲಿ ಕಾಣಬಹುದು. ಹಿರಿಯ ಯತಿಗಳಿದ್ದರೂ ದೀರ್ಘಕಾಲ ಪಟ್ಟದ ದೇವರನ್ನು ಪೂಜಿಸುವ ಜೇಷ್ಠತೆಯನ್ನು ಪಡೆದ ಯತಿಗಳು ಅವರು ಎಂದು ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಹೊಗಳಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರ ವಿರಾಟಪರ್ವ ಪ್ರವಚನ ಮಂಗಲ ಮತ್ತು ಷಷ್ಠಿಪೂರ್ತಿ ಪ್ರಯುಕ್ತ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾನ, ಧರ್ಮ, ಪ್ರವಚನ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಜೇಷ್ಠತೆ ಕಾಪಾಡಿಕೊಂಡು ಬಂದಿರುವ ಅದಮಾರು ಶ್ರೀಗಳ ಜನ್ಮನಕ್ಷತ್ರದ ದಿನವೇ ಗುರುವಂದನೆ ಸಲ್ಲಿಸುತ್ತಿರುವುದು ಸಂತಸ ತಂದಿದೆ. ಅವರ ಉಪದೇಶ, ಹಿತವಚನ ನಿರಂತರವಾಗಿ ಎಲ್ಲರಿಗೂ ಸಿಗಲಿ ಎಂದು ಹಾರೈಸಿದರು.

ADVERTISEMENT

ಕುಂಜಾರು ದುರ್ಗಾ ದೇವಸ್ಥಾನವನ್ನು ಕಾಷ್ಠಶಿಲ್ಪ, ಶಿಲಾಶಿಲ್ಪ ದೇವಸ್ಥಾನವಾಗಿ ಗುರುತಿಸಲ್ಪಟ್ಟಿರುವುದರ ಹಿಂದೆ ವಿಶ್ವಪ್ರಿಯ ತೀರ್ಥರ ಶ್ರಮ ದೊಡ್ಡದು. ವಸತಿ ನಿಲಯಗಳ ಸ್ಥಾಪನೆ, ವಿದ್ಯಾಸಂಸ್ಥೆಗಳ ಸ್ಥಾಪನೆ, ಮಠಗಳ ವಿಸ್ತಾರದಲ್ಲಿ ಕ್ರಾಂತಿಯನ್ನು ಮಾಡಿದ್ದಾರೆ ಎಂದರು.

ಅದಮಾರು ಶ್ರೀಗಳ ಅನುಸಂಧಾನ, ಚಿಂತನೆ, ಉಪನ್ಯಾಸಗಳು ವಿಶೇಷ. ಅವರ ಸೇವೆಗೆ ಪ್ರತಿಯಾಗಿ ಏನನ್ನೂ ಮಾಡಿದರೂ ಅಲ್ಪವೇ. ಅವರ ಶಿಷ್ಯರಾಗಿದ್ದುಕೊಂಡು ನಾವೆಲ್ಲ ಮುನ್ನಡೆಯುತ್ತೇವೆ ಎಂದರು.

ಅದಮಾರು ಹಿರಿಯ ಯತಿಗಳ ರಾಘವೇಂದ್ರ ವಿಜಯ, ಶ್ರೀಕೃಷ್ಣ ಲೀಲಾಮೃತ ವಿಷಯಗಳ ಪ್ರವಚನಗಳನ್ನೊಳಗೊಂಡ ತತ್ವ ಸಂಶೋಧನಾ ಸಂಸತ್‌ನಿಂದ ಪ್ರಕಾಶಿಸಲ್ಪಟ್ಟ 2 ಕೃತಿಗಳು ಹಾಗೂ 60 ವರ್ಷಗಳ ಸಾಧನೆಗಳ ಚಿತ್ರಗಳನ್ನೊಳಗೊಂಡ, ವಿದ್ವಾಂಸರ, ಅಭಿಮಾನಿಗಳ ಲೇಖನವಿರುವ ಸ್ಮರಣ ಸಂಚಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.‌

ಗುರುವಂದನೆ ಸ್ವೀಕರಿಸಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕಾದರೆ ಪ್ರತಿಷ್ಠೆಯನ್ನು ಬದಿಗಿಡಬೇಕು. ಸಮಾಜದಿಂದ ಸಿಕ್ಕ ಗೌರವ, ಸನ್ಮಾನಗಳನ್ನು ವಿಶ್ವಕ್ಕೆ ಅರ್ಪಿಸಬೇಕು ಎಂದರು.

ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಮಾತನಾಡಿ, ಭಗವಂತನದಲ್ಲಿರುವ ಗುರುತ್ವವನ್ನು ಹಿರಿಯ ಯತಿಗಳಲ್ಲಿ ಕಾಣಬಹುದು. ಶಿಷ್ಯರಿಗೆ ಆಪತ್ತು ಬಾರದಂತೆ, ಭಗವಂತನಿಂದ ವಿಮುಖರಾಗದಂತೆ ಜತೆಗಿದ್ದು, ಪ್ರತಿಹಂತದಲ್ಲೂ ಮಾರ್ಗದರ್ಶನ ನೀಡಿದರು ಎಂದು ಸ್ಮರಿಸಿದರು.

ಪಲಿಮಾರು ಮಠದ ಕಿರಿಯ ಯತಿಗಳಾದ ವಿದ್ಯಾರಾಜೇಶ್ವರ ಉಪಸ್ಥಿತರಿದ್ದರು.ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕರಾದ ರಘುಪತಿ ಭಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.