ADVERTISEMENT

ಶಾಲೆ ಕಲಿಯದ ವ್ಯಕ್ತಿಗೆ ಪದ್ಮಶ್ರೀ ಗೌರವ: ಅಕ್ಷರ ಸಂತ ಹಾಜಬ್ಬ

ಸನ್ಮಾನ, ಗೌರವಕ್ಕೆ ಅಭಿನಂದನೆ ಸಲ್ಲಿಸಿದ ಅಕ್ಷರ ಸಂತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 13:39 IST
Last Updated 17 ನವೆಂಬರ್ 2021, 13:39 IST
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರಿಗೆ ಜಿಲ್ಲಾಡಳಿತ ಹಾಗೂ ಎಂಜಿಎಂ ಕಾಲೇಜಿನಿಂದ ಸನ್ಮಾನಿಸಲಾಯಿತು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರಿಗೆ ಜಿಲ್ಲಾಡಳಿತ ಹಾಗೂ ಎಂಜಿಎಂ ಕಾಲೇಜಿನಿಂದ ಸನ್ಮಾನಿಸಲಾಯಿತು.   

ಉಡುಪಿ: ಐಎಎಸ್‌, ಐಪಿಎಸ್‌ ಕಬ್ಬಿಣದ ಕಡಲೆಯಲ್ಲ; ಶ್ರಮಪಟ್ಟು ಓದಿದರೆ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬುಧವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.‌

ಪದವಿ ಅಥವಾ ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿದರೆ ಐಎಎಸ್‌, ಐಪಿಎಸ್‌ ಪರೀಕ್ಷೆಗಳಲ್ಲಿ ಸುಲಭವಾಗಿ ಉತ್ತೀರ್ಣರಾಗಬಹುದು. ಪಿಯುಸಿ ಮುಗಿದ ಬಳಿಕ ಮೊದಲ ವರ್ಷದ ಪದವಿಗೆ ಸೇರಿದ ಕೂಡಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಅಗತ್ಯ ತರಬೇತಿ ಪಡೆದುಕೊಳ್ಳಿ ಎಂದು ಲೋಕಾಯುಕ್ತರು ಕಿವಿಮಾತು ಹೇಳಿದರು.

ADVERTISEMENT

ಐಎಎಸ್‌, ಐಪಿಎಸ್‌ ಮಾತ್ರವಲ್ಲ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶೇ 99ರಷ್ಟು ಶ್ರಮ ಹಾಗೂ ಶೇ 1ರಷ್ಟು ಪ್ರೇರಣೆ ಇದ್ದರೆ ಯಶಸ್ಸು ಖಂಡಿತ ನಿಮ್ಮದಾಗಲಿದೆ. ಕಷ್ಟಪಡದಿದ್ದರೆ ಇಷ್ಟಪಟ್ಟಿದ್ದು ಸಿಗುವುದಿಲ್ಲ ಎಂದು ಸಲಹೆ ನೀಡಿದ ಲೋಕಾಯುಕ್ತರು 1961ರಲ್ಲಿ ಎಂಜಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಕೋವಿಡ್ ನಿರೋಧಕ ಲಸಿಕೆ ಪಡೆಯಬೇಕು. ಕುಟುಂಬದ ಸದಸ್ಯರು, ಸ್ನೇಹಿತರು ಲಸಿಕೆ ಪಡೆಯದಿದ್ದರೆ ಅವರ ಮನವೊಲಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಪ್ರತಿಯೊಬ್ಬರೂ ಲಸಿಕೆ ಪಡೆದರೆ ಕೋವಿಡ್‌ ಸಾವಿನ ಪ್ರಮಾಣವನ್ನು ತಗ್ಗಿಸಬಹುದು. ಜಿಲ್ಲೆಯ ಆರ್ಥಿಕತೆ ಬಲಗೊಳ್ಳಲಿದೆ. ಸಾರ್ವಜನಿಕರು ಧೈರ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬಹುದು ಎಂದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ‘ನಾನು ಶಾಲೆಯಲ್ಲಿ ಕಲಿತವನಲ್ಲ, ಬಡತನದ ಬೇಗೆಯಲ್ಲಿ ಬೆಂದಿದ್ದ ನನಗೆ ಶಿಕ್ಷಣದ ಮಹತ್ವದ ಅರಿವಾಗಿ, ಕಿತ್ತಳೆ ಹಣ್ಣು ಮಾರಿ ಬಂದ ಹಣದಿಂದ ಶಾಲೆ ಆರಂಭಿಸಿದೆ. ತೀರಾ ಸಾಮಾನ್ಯ ವ್ಯಕ್ತಿಯ ಕಾರ್ಯವನ್ನು ಗುರುತಿಸಿ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿದೆ. ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಸನ್ಮಾನ ಮಾಡುತ್ತಿವೆ. ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ಕಾಲೇಜು ಪ್ರಾಂಶುಪಾಲರಾದ ಡಾ.ದೇವಿದಾಸ ನಾಯಕ್ ಮಾತನಾಡಿ, ಹಣ ಇಲ್ಲದಿದ್ದರೂ, ಛಲವೊಂದಿದ್ದರೆ ಎಂಥ ಕೆಲಸವನ್ನಾದರೂ ಸಾಧಿಸಬಹುದು ಎಂಬುದನ್ನು ಹರೇಕಳ ಹಾಜಬ್ಬ ತೋರಿಸಿಕೊಟ್ಟಿದ್ದಾರೆ. ಉದಾತ್ತ ಧ್ಯೇಯ, ಶುದ್ಧವಾದ ಮನಸ್ಸಿದ್ದರೆ ಸಮಾಜದಲ್ಲಿ ಎದ್ದು ನಿಲ್ಲುತ್ತಾರೆ ಎಂಬುದಕ್ಕೆ ಹಾಜಬ್ಬ ನಿದರ್ಶನ. ಅಕ್ಷರದ ಅರಿವಿಲ್ಲದಿದ್ದರೂ ಅಕ್ಷರ ಸಂತನಾಗಿ ಬೆಳೆದಿದ್ದು ಬಹುದೊಡ್ಡ ಸಾಧನೆ ಎಂದು ಬಣ್ಣಿಸಿದರು.

ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಹಾಜಬ್ಬ ಅವರಿಗೆ ಶಾಲು ಹೊದಿಸಿ ಪೇಟ ತೊಡಿಸಿ ಸನ್ಮಾನಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದಲೂ ಸನ್ಮಾನಿಸಲಾಯಿತು.

ಎಂಜಿಎಂ ಕಾಲೇಜಿನ ‘ಪುಸ್ತಕ ದಾನ’ ಅಭಿಯಾನದಲ್ಲಿ ಸಂಗ್ರಹವಾದ 30 ಪುಸ್ತಕಗಳನ್ನು ಹರೇಕಳ ಹಾಜಬ್ಬ ಅವರ ಶಾಲೆಯ ಗ್ರಂಥಾಲಯಕ್ಕೆ ನೀಡಲಾಯಿತು. ಇದೇವೇಳೆ ವಿದ್ಯಾರ್ಥಿಗಳೊಂದಿಗೆ ಹಾಜಬ್ಬ ಕೆಲಹೊತ್ತು ಸಂವಾದ ನಡೆಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿದರು. ಪ್ರಾಂಶುಪಾಲರಾದ ಮಾಲತಿದೇವಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್‌ ಯೋಜನಾಧಿಕಾರಿ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

‘ಅತಿದೊಡ್ಡ ಗೌರವ’

ಕಡು ಬಡತನದಿಂದ ಬಂದ ಸಾಮಾನ್ಯ ವ್ಯಕ್ತಿಗೆ ವಿಮಾನದಲ್ಲಿ ಓಡಾಡುವ, ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ ಪಡೆಯುವ, ಗಣ್ಯರಿಂದ ಗೌರವ ಸ್ವೀಕರಿಸುವ ಅವಕಾಶ ಸಿಕ್ಕಿದ್ದು, ವಿಶ್ವವಿದ್ಯಾಲಯದ ಪಠ್ಯದಲ್ಲಿ ಸ್ಥಾನ ದೊರೆತಿದ್ದು ಜೀವನದ ಅತಿದೊಡ್ಡ ಸೌಭಾಗ್ಯವೇ ಸರಿ ಎಂದು ಹರೇಕಳ ಹಾಜಬ್ಬ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.